

ಹೆಬ್ರಿ: ತಾಲೂಕಿನ ಶೇಡಿಮನೆ ಎಂಬಲ್ಲಿ ಮಾಲಿನಿ(27) ಎಂಬುವರು ಸೆ.29ರಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಇದೇ ವೇಳೆ ಆಕೆಯ ಪತಿಯ ಸ್ನೇಹಿತೆ ಮನೆಗೆ ಬಂದಿರುವ ಹಿನ್ನೆಲೆಯಲ್ಲಿ ಈ ಸಾವಿನ ಬಗ್ಗೆ ಸಂಶಯ ಇದೆ ಎಂಬುದಾಗಿ ಮೃತರ ತಾಯಿ ಜಲಜಾ ಪೂಜಾರಿ ಅಮಾಸೆಬೈಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಮಾಲಿನಿಯವರು ಪತಿ ಸಂತೋಷ್ ಮತ್ತು ಮಕ್ಕಳಾದ ಮಾನ್ವಿ, ಸನ್ವಿತಾ, ಮನ್ವಿತಾ, ತಾಯಿ ಜಲಜಾ ಪೂಜಾರಿ ಜತೆ ಶೇಡಿಮನೆಯಲ್ಲಿ ವಾಸವಾಗಿದ್ದರು. ಸೆ.29ರಂದು ಜಲಜಾ ಪೂಜಾರಿ ನೌಕರಿ ಮಾಡುವ ಗೇರುಬೀಜ ಕಾರ್ಖಾನೆಗೆ ಸ್ಥಳೀಯರೊಬ್ಬರು ಫೋನ್ ಮಾಡಿ ಮನೆಯಲ್ಲಿ ಮಕ್ಕಳಿಗೆ ಹುಷಾರಿಲ್ಲ ಎಂಬ ವಿಚಾರವನ್ನು ಜಲಜಾ ಪೂಜಾರಿಗೆ ತಿಳಿಸಲು ಹೇಳಿದ್ದಾರೆ. ಅದರಂತೆ ಜಲಜಾ ಪೂಜಾರಿ 4 ಗಂಟೆ ಸುಮಾರಿಗೆ ಮನೆಗೆ ಧಾವಿಸಿದಾಗ ಮಾಲಿನಿಯನ್ನು ರೂಮಿನ ಬಾಗಿಲಿನಿಂದ ಹೊರಗೆ ಎಳೆದು ತಂದು ಮಲಗಿಸಿದ ಸ್ಥಿತಿಯಲ್ಲಿ ಇದ್ದು ಬಲಗಾಲು ರೂಮಿನ ದಾರಂದದ ಮೇಲೆ ಇತ್ತು.
ಮಾಲಿನಿ ಮಧ್ಯಾಹ್ನ 1.45ರಿಂದ 2.30ರ ನಡುವೆ ಕೋಣೆಯ ಬಾಗಿಲಿಗೆ ಚಿಲಕ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆ ಸಮಯದಲ್ಲಿ ಮನೆಗೆ ಬಂದ ಸಂತೋಷನ ಸ್ನೇಹಿತೆ ಪ್ರೇಮಲತಾ ಎಂಬುವರು ಇದನ್ನು ನೋಡಿ ಛಾವಣಿಗೆ ಹತ್ತಿ ಕೋಣೆಯ ಮೇಲಿನ ಮೂರು ಹೆಂಚನ್ನು ಸರಿಸಿ ಕೋಣೆಯೊಳಗೆ ಇಳಿದು ಮಾಲಿನಿಯನ್ನು ನೇಣಿನ ಕುಣಿಕೆಯಿಂದ ಇಳಿಸಿ ಕೋಣೆಯ ಹೊರಗೆ ಎಳೆದು ತಂದು ಪ್ರಾಣ ಉಳಿಸಲು ಯತ್ನಿಸಿದ್ದಾರೆ ಎಂದು ಸ್ವತಹ ಪ್ರೇಮಲತಾ, ಜಲಜಾ ಪೂಜಾರಿಗೆ ತಿಳಿಸಿದ್ದಾರೆ.
ಮಾಲಿನಿಗೆ ಮದುವೆಯಾಗಿ ಎಂಟು ವರ್ಷಗಳಾಗಿದ್ದು, ಪ್ರಸ್ತುತ ದಂಪತಿ ನಡುವೆ ವೈಮನಸ್ಸು ಇತ್ತು. ಅದಾಗ್ಯೂ ಜತೆಗೆ ವಾಸವಾಗಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿರುವ ಹೊತ್ತಿನಲ್ಲಿ ಸಂತೋಷನ ಸ್ನೇಹಿತೆ ಪ್ರೇಮಲತಾ ಒಬ್ಬರೇ ಇದ್ದರು ಎಂಬ ಕಾರಣಕ್ಕೆ ಮಗಳ ಸಾವಿನ ಬಗ್ಗೆ ಸಂಶಯ ಇದೆ ಎಂದು ಜಲಜಾ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ.