ಜಿಪಂನಲ್ಲಿ ಸೂರ್ಯಘರ್ ಯೋಜನೆ ವಿದ್ಯುತ್​ ಬಳಕೆಗೆ ಚಿಂತನೆ

ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಪ್ರತಿಕ್​ ಬಾಯಲ್ ಮಾತನಾಡಿದರು.
ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಪ್ರತಿಕ್​ ಬಾಯಲ್ ಮಾತನಾಡಿದರು.
Published on
ಉಡುಪಿ : ಸರ್ಕಾರಿ ಕಟ್ಟಡಗಳಲ್ಲಿ ಸೂರ್ಯಘರ್ ಯೋಜನೆ ಜಾರಿಗೆ ಆದ್ಯತೆ ನೀಡಲಾಗುತ್ತಿದ್ದು, ಜಿಪಂನಲ್ಲಿ ಸೋಲಾರ್​ ಪ್ಯಾನಲರ್​ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಇದರಿಂದ ಶೇ.40ರಷ್ಟು ವಿದ್ಯುತ್​ ಬಿಲ್​ ಉಳಿತಾಯ ಮಾಡಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್​ ಡಾ.ವಿ.ಎಸ್​ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚಿನ ಮನೆಗಳಲ್ಲಿ ಸೂರ್ಯಘರ್ ಯೋಜನೆ ಜಾರಿಗೆ ಬ್ಯಾಂಕ್​ಗಳು ಆರ್ಥಿಕ ನೆರವು ನೀಡಬೇಕು. ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್​ ಶಾಖೆಗಳಲ್ಲಿ ಸೋಲಾರ್​ ಪ್ಯಾನಲ್​ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಈವರೆಗೆ 5661 ಅರ್ಜಿಗಳು ಸ್ವೀಕೃತವಾಗಿದ್ದು, 1337 ಅರ್ಜಿಗಳು ತಿರಸತಗೊಂಡಿವೆ. 3937 ಫಲಾನುಭವಿಗಳಿಗೆ 38.81 ಕೋಟಿ ರೂ. ಸಾಲ ವಿತರಿಸಲಾಗಿದೆ. ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಶೀಘ್ರ ಕ್ರಮ ವಹಿಸಬೇಕು. ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 145 ಜನ ಫಲಾನುಭವಿಗಳಿಗೆ 5.45 ಕೋಟಿ ಆರ್ಥಿಕ ನೆರವು ವಿತರಿಸಲಾಗಿದೆ. ಬೇರೆ ನಿಗಮ ಅಥವಾ ಯೋಜನೆಯಲ್ಲಿ ಅನುದಾನ ಲಭ್ಯವಿದ್ದರೆ ಅಂಥ ಉದ್ಯಮಗಳನ್ನು ಈ ಯೋಜನೆಯಿಂದ ಹೊರಗಿಡಬೇಕು. ಇದರಿಂದ ಹೆಚ್ಚಿನ ಫಲಾನುಭವಿಗಳಿಗೆ ಪಿಎಂಇಜಿಪಿ ಯೋಜನೆ ಪ್ರಯೋಜನ ಸಿಗಲಿದೆ ಎಂದರು.

ಕೆನರಾ ಬ್ಯಾಂಕ್​ ರೀಜನಲ್​ ಮ್ಯಾನೇಜರ್​ ಮಹಾಮಾಯ ಪ್ರಸಾದ್​ ರಾಯ್​ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್​ ಠೇವಣಿ ಅನುಪಾತವು ಶೇ.47.66 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.48.62 ರಷ್ಟಾಗಿ ಶೇ. 0.96 ರಷ್ಟು ಏರಿಕೆಯಾಗಿದೆ. ಸಿ.ಡಿ ಅನುಪಾತದಲ್ಲಿ ಜಿಲ್ಲೆಯು ಶೇ. 50 ಕ್ಕಿಂತ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಸಿ.ಡಿ ಅನುಪಾತ ಹೆಚ್ಚಿಸಲು ಎಲ್ಲಾ ಬ್ಯಾಂಕ್​ಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.16 ಕೋಟಿ ರೂ.ಗಳ ವಾರ್ಷಿಕ ಕ್ರೆಡಿಟ್​ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಈವರೆಗೆ ಶೇ. 57.63 ಗುರಿ ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 2274 ಕೋಟಿ ರೂ., ಎಂ.ಎಸ್​.ಎಂ.ಇ ವಲಯಕ್ಕೆ 2426 ಕೋಟಿ ರೂ. , ಶಿಕ್ಷಣ ವಲಯಕ್ಕೆ 116 ಕೋಟಿ ರೂ., ವಸತಿ ಕ್ಷೇತ್ರಗಳಿಗೆ 111 ಕೋಟಿ ರೂ., ಇತರೆ ಕ್ಷೇತ್ರಗಳಿಗೆ 194 ಕೋಟಿ ರೂ. ಹಾಗೂ ಆದ್ಯತೇತರ ವಲಯಗಳಿಗೆ 3819 ಕೋಟಿ ರೂ. ವಿತರಿಸಲಾಗಿದೆ ಎಂದರು.

ಆರ್​.ಬಿ.ಐ ಎಜಿಎಂ ನಿಶಾ ಠಾಕೂರ್​ ಮಾತನಾಡಿ, ಆರ್​.ಬಿ.ಐ ನಿಯಮಾನುಸಾರ ಜಿಲ್ಲೆಗಳ ಸಿ.ಡಿ ಅನುಪಾತವು ಶೇ. 50 ಕ್ಕಿಂತ ಕಡಿಮೆ ಇರಬಾರದು. ಇದನ್ನು ಹೆಚ್ಚಿಸಲು ಎಲ್ಲಾ ಬ್ಯಾಂಕ್​ಗಳ ಅಧಿಕಾರಿಗಳೂ ಕಾರ್ಯಪ್ರವೃತ್ತರಾಗಬೇಕು ಎಂದರು. ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಜಿ., ನಬಾರ್ಡ್​ ಡಿ.ಡಿ.ಎಂ. ಸಂಗೀತಾ ಕರ್ತಾ, ಎಸ್​ಸಿಡಿಸಿಸಿ ಬ್ಯಾಂಕ್​ ಡಿಜಿಎಂ ನಿತ್ಯಾನಂದ ಶೇರಿಗಾರ್​ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net