ಕರಾವಳಿಯಲ್ಲಿ ವಾಟರ್​ ಮೆಟ್ರೋ ಯೋಜನೆ ಜಾರಿಗೆ ಸಮೀಕ್ಷೆ

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್​
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್​
Published on
ಉಡುಪಿ: ಕೇರಳದ ಕೊಚ್ಚಿ ವಾಟರ್​ ಮೆಟ್ರೋ ಮಾದರಿಯಲ್ಲಿ ಕರ್ನಾಟಕದ ಕರಾವಳಿ ನಗರಗಳಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಕೊಚ್ಚಿ ವಾಟರ್​ ಮೆಟ್ರೋ ತಂಡ ಕರಾವಳಿಯ ಮೂರು ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಶೀಘ್ರವೇ ಪ್ರಾಥಮಿಕ ವರದಿ ನೀಡುವ ನಿರೀಕ್ಷೆ ಇದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್​ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದಲ್ಲಿ ಸಂಘದ ಮಾಸಿಕ ಪತ್ರಿಕೆ ಸನ್ಮತಿ ಮಾರ್ಚ್​ ತಿಂಗಳ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮುಂದಿನ ಹಂತದಲ್ಲಿ ತಾಂತ್ರಿಕವಾಗಿ ಟ್ರಾಫಿಕ್​ ಸರ್ವೆ ನಡೆಸಿ, ವಿಸತ ಯೋಜನಾ ವರದಿ ತಯಾರಿಸಲಾಗುವುದು. ಈ ಕುರಿತು ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಉಡಾನ್​ ಯೋಜನೆ ತರಲು ಪ್ರಯತ್ನ
ಮಂಗಳೂರು, ಮರವಂತೆ, ಗೋವಾ, ಕರಾವಳಿ, ಮಂಗಳೂರು, ಕೊಚ್ಚಿ ಮತ್ತು ಮಂಗಳೂರು, ಮೈಸೂರು (ಕಬಿನಿ ಪ್ರದೇಶ) ಸಂಪರ್ಕಿಸುವ ವಾಟರ್​ ಏರೋಡ್ರೋಮ್​ಗಳಿಗೆ ಅನುಮೋದನೆ ನೀಡಲಾಗಿದೆ. ಭಾರೀ ವಾಹನಗಳ ಸಂಚಾರದಿಂದ ಉಂಟಾಗುವ ನಗರ ಸಂಚಾರ ದಟ್ಟಣೆ ಕಡಿಮೆ ಮಾಡಲು ಟ್ರಕ್​ಗಳನ್ನು ನದಿ ಮತ್ತು ಸಮುದ್ರ ಮಾರ್ಗದ ಮೂಲಕ ಸಾಗಿಸುವ ರೋ-ರೋ ಫೆರ್ರಿ ಸೇವೆಗಳನ್ನು ಪರಿಚಯಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ರೂಪುರೇಷೆೆ ಸಿದ್ಧಪಡಿಸುತ್ತಿದೆ. ಬಹುಸಂಪರ್ಕ ವ್ಯವಸ್ಥೆ, ಪ್ರವಾಸೋದ್ಯಮ, ಮೀನುಗಾರಿಕೆ, ಕೈಗಾರಿಕೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
500 ಕೋಟಿ ರೂ. ನೀಡಲು ಪ್ರಸ್ತಾವನೆ
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಮಂಡಳಿಯಲ್ಲಿದ್ದ 10 ಕೋಟಿ ರೂ. ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಲಾಗಿದೆ. ಈ ಬಾರಿಯ ಬಜೆಟ್​ನಲ್ಲಿ ಮತ್ತೆ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮಂಡಳಿಗೆ ಪ್ರತಿ ವರ್ಷ ಬಜೆಟ್​ನಲ್ಲಿ 100 ರಿಂದ 500 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಯವರಿಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಅಸ್ಟೋ ಮೋಹನ್​ ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ಪತ್ರಿಕಾ ಭವನ ಸಮಿತಿಯ ನಿಕಟಪೂರ್ವ ಸಂಚಾಲಕ ಅಜಿತ್​ ಆರಾಡಿ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net