ಉತ್ತರ ಭಾರತದ ವ್ಯಕ್ತಿಯಿಂದ ಡೇವಿಡ್​ ಹತ್ಯೆಗೆ ಸುಪಾರಿ

ಡೇವಿಡ್​ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೈಗೊಂಡ ಕಾರ್ಯಾಚರಣೆ ಕುರಿತು ಉಡುಪಿಯಲ್ಲಿ ಎಸ್ಪಿ ಹರಿರಾಮ್​ ಶಂಕರ್​ ಮಾಹಿತಿ ನೀಡಿದರು. ಎಎಸ್ಪಿ ಸುಧಾಕರ್​ ನಾಯಕ್​, ಡಿವೈಎಸ್ಪಿ ಬೆಳ್ಳಿಯಪ್ಪ ಇದ್ದರು.
ಡೇವಿಡ್​ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೈಗೊಂಡ ಕಾರ್ಯಾಚರಣೆ ಕುರಿತು ಉಡುಪಿಯಲ್ಲಿ ಎಸ್ಪಿ ಹರಿರಾಮ್​ ಶಂಕರ್​ ಮಾಹಿತಿ ನೀಡಿದರು. ಎಎಸ್ಪಿ ಸುಧಾಕರ್​ ನಾಯಕ್​, ಡಿವೈಎಸ್ಪಿ ಬೆಳ್ಳಿಯಪ್ಪ ಇದ್ದರು.
Published on

* ಉಡುಪಿ ಎಸ್ಪಿ ಹರಿರಾಮ್​ ಶಂಕರ್​ ಮಾಹಿತಿ

* ಶಂಕಿತನ ಬಂಧನಕ್ಕೆ ತೆರಳಿದ ಪೊಲೀಸ್​ ತಂಡ

* 3 ಕೋಟಿ ರೂ. ವ್ಯವಹಾರದ ವಿಚಾರವಾಗಿ ಕೊಲೆ

ಉಡುಪಿ: ಕಾಪು ತಾಲೂಕು ಮುದರಂಗಡಿಯಲ್ಲಿ ನಡೆದ ಡೇವಿಡ್​ ಡಿಸೋಜ ಹತ್ಯೆಗೆ ಉತ್ತರ ಭಾರತದ ವ್ಯಕ್ತಿಯೋರ್ವ ಸುಪಾರಿ ಕೊಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯ ಬಂಧನಕ್ಕಾಗಿ ಉಡುಪಿ ಜಿಲ್ಲಾ ಪೊಲೀಸ್​ ಟೀಮ್​ ತೆರಳಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಮಾಹಿತಿ ನೀಡಿದರು.
ಉಡುಪಿಯ ತಮ್ಮ ಕಚೇರಿಯಲ್ಲಿ ಶನಿವಾರ (ಆ.8) ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 3 ಕೋಟಿ ರೂ. ವ್ಯವಹಾರದ ವಿಚಾರವಾಗಿ ಸುಪಾರಿ ಕಿಲ್ಲರ್ಸ್​ ಮೂಲಕ ಹತ್ಯೆ ಮಾಡಿಸಿರುವುದು ತಿಳಿದು ಬಂದಿದೆ. ಪಿಸ್ತೂಲ್​ನಲ್ಲಿ ಒಟ್ಟು 10 ಸುತ್ತಿನ ಗುಂಡುಗಳಿದ್ದು ಅದರಲ್ಲಿ ಮೂರು ಗುಂಡು ಹಾರಿಸಲಾಗಿದೆ ಎಂದು ತಿಳಿಸಿದರು. 

ಬಂಧಿತರ ವಿರುದ್ಧ ಹಲವು ಪ್ರಕರಣ

ಬಂ

ಧಿ

ಬಂಧಿಸಲ್ಪಟ್ಟ ಮೂವರೂ ಆರೋಪಿಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ ರಾಬರಿ, ದರೋಡೆ, ಕೊಲೆ, ಕೊಲೆ ಯತ್ನ ಸೇರಿದಂತೆ ಅನೇಕ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಥಾಣಾ ಪಿಲ್ವದ ರಾಜು ಪ್ರಮುಖ ಆರೋಪಿಯಾಗಿದ್ದು ಆತನ ವಿರುದ್ಧ ಉತ್ತರ ಪ್ರದೇಶ, ಮಾಹಾರಾಷ್ಟ್ರ, ದೆಹಲಿ ಸೇರಿದಂತೆ 5 ರಾಜ್ಯಗಳಲ್ಲಿ ಒಟ್ಟು 17 ಪ್ರಕರಣ ದಾಖಲಾಗಿದೆ. ಉತ್ತರಾಖಂಡದ ಅಜಯ್​ ರಸ್ತೋಗಿ ಯಾನೆ ಅನ್ಮೋಲ್​ ವಿರುದ್ಧ 4 ರಾಜ್ಯಗಳಲ್ಲಿ 8 ಪ್ರಕರಣ ಹಾಗೂ ಬಿಹಾರ ರಾಜ್ಯದ ಜಿಯಾಹುಲ್​ ವಜೂಲ್​ ಶೇಖ್​ ಯಾನೆ ದೀಪಕ್​ ವಿರುದ್ಧ 12 ಪ್ರಕರಣ ದಾಖಲಾಗಿದೆ. ಇವರು ಸುಪಾರಿ ಪಡೆದು ಹತ್ಯೆ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದರು ಎಂದರು.

ಸ್ಥಳೀಯ ಹಲವರ ವಿಚಾರಣೆ

ಹತ್ಯೆಗೆ ಸಂಬಂಧಿಸಿ ಸ್ಥಳೀಯವಾಗಿ ಅನೇಕರನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿ ಮಾಹಿತಿ ಕಲೆ ಹಾಕುತ್ತಿದ್ದೇವೆ. ಯಾರನ್ನೂ ವಶಕ್ಕೆ ಪಡೆದಿಲ್ಲ. ಬಂಧಿತ ಮೂವರೂ ಆರೋಪಿಗಳು ಉಡುಪಿಯಲ್ಲೇ ವಾಸ್ತವ್ಯ ಮಾಡಿದ್ದರು. 2 ತಿಂಗಳಿನಿಂದ ಹತ್ಯೆಯ ಸಂಚು ನಡೆದಿತ್ತು. ವ್ಯಕ್ತಿಯೋರ್ವ ಮೊದಲೇ ಆಗಮಿಸಿ ಡೇವಿಡ್​ ಅವರ ಎಲ್ಲ ಚಲನವಲನಗಳನ್ನು ತಿಳಿದು ಹೋಗಿರುವ ಮಾಹಿತಿಯೂ ಲಭಿಸಿದೆ. ಅವರಿಗೆ ಸಹಕರಿಸಿದವರು ಯಾರೆಂಬ ಪತ್ತೆ ಕಾರ್ಯ ನಡೆದಿದೆ. ಪ್ರಮುಖ ಆರೋಪಿ ರಾಜು ಎಂಬವರ ಬ್ಯಾಂಕ್​ ಖಾತೆಗೆ ಹತ್ಯೆ ನಡೆದ ಬಳಿಕ 2 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಜಮಾ ಆಗಿದೆ. ಹತ್ಯೆ ಮಾಡಲು ಎಷ್ಟು ಲಕ್ಷ ರೂ. ಸುಪಾರಿ ಪಡೆದಿದ್ದರು ಎಂಬ ಮಾಹಿತಿ ಲಭಿಸಿಲ್ಲ ಎಂದು ತಿಳಿಸಿದರು. 
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಸುಧಾಕರ್​ ನಾಯಕ್​, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಇದ್ದರು. 

ಬೈಕ್​ಗೆ ಸ್ಕೂಲ್​ ಬಸ್​ನ ನಂಬರ್​!

ಬಂಧನಕ್ಕೊಳಗಾಗಿರುವ ಆರೋಪಿಗಳ ಬ್ಯಾಗ್​ನಲ್ಲಿದ್ದ ವಿವಿಧ ಸಿಮ್​, ಮೊಬೈಲ್​ ವಶಕ್ಕೆ ಪಡೆಯಲಾಗಿದೆ. ಸುಪಾರಿ ಪಡೆದು ಹತ್ಯೆ ಮಾಡಿದ ಬಳಿಕ ಅವರು ಸಿಮ್​ ಹಾಗೂ ಮೊಬೈಲ್​ ನಾಶ ಮಾಡುತ್ತಿದ್ದರು. ಒಂದು ದಿನ ವಿಳಂಬವಾದರೂ ಸಹ ನಮಗೆ ಅವರ ಬಳಿಯಿದ್ದ ಸಿಮ್​ ಅಥವಾ ಮೊಬೈಲ್​ ಲಭಿಸುತ್ತಿರಲಿಲ್ಲ. ಇದೀಗ ಅವರು ಕರೆ ಮಾಡಿರುವ ಹಾಗೂ ಸ್ವೀಕರಿಸಿರುವ ವಿವಿಧ ಕರೆಗಳ ಮಾಹಿತಿ ಲಭ್ಯವಾಗಿದೆ. ಡೇವಿಡ್​ ಅವರ ಹತ್ಯೆಗಾಗಿ ಬಳಸಿದ ಬೈಕ್​ಗೆ ನಕಲಿ ನಂಬರ್​ ಪ್ಲೇಟ್​ ಅಳವಡಿಸಿಕೊಂಡಿದ್ದು, ಅದು ಸ್ಕೂಲ್​ ಬಸ್ಸೊಂದರ ನಂಬರ್​ ಆಗಿದೆ. ಪಡುಬಿದ್ರೆಯಲ್ಲಿ ಬಿಟ್ಟುಹೋದ ಬೈಕ್​ ಕಳವು ಮಾಡಿದ್ದೋ ಅಥವಾ ಅದು ಯಾರದ್ದೆಂದು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಎಸ್ಪಿ ಹರಿರಾಮ್​ ತಿಳಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net