

ಉಡುಪಿ: ಜಿಲ್ಲೆಯಲ್ಲಿ ನಡೆದ ಹಲವು ಕುಕೃತ್ಯ, ಘಟನೆಗಳಿಗೆ ಮಾದಕ ದ್ರವ್ಯ ಮಾರಾಟ, ಸೇವನೆಯೂ ಕಾರಣ ಇರಬಹುದಾದ ಶಂಕೆಯಿದೆ. ನಿಯಂತ್ರಣಕ್ಕೆ ವಿವಿಧ ಕಾನೂನುಗಳಿದ್ದರೂ ಸಹ ಗುಪ್ತವಾಗಿ ಮಾದಕ ದ್ರವ್ಯ ಮಾರಾಟ ನಡೆಯುತ್ತಿರುವ ಅನುಮಾನ ಜನರಲ್ಲಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ನಮ್ಮ ಕರ್ನಾಟಕ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸುಜಯ್ ಪೂಜಾರಿ ಒತ್ತಾಯಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸಂಘಟನೆಯ ಪದಾಧಿಕಾರಿಗಳೊಂದಿಗೆ ಮಂಗಳವಾರ (ಸೆ.22) ತೆರಳಿ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ಮಾದಕ ದ್ರವ್ಯ ತಡೆಹಿಡಿಯುವಲ್ಲಿ ಆಯಾಯ ಊರಿನಲ್ಲಿ ಜನಸಾಮಾನ್ಯರನ್ನು ಗುಪ್ತಚರ ಇಲಾಖೆ ಅಥವಾ ಪೊಲೀಸ್ ಇಲಾಖೆಗೆ ಬಾತ್ಮೀದಾರರನ್ನಾಗಿ ನೇಮಿಸಿಕೊಳ್ಳಬೇಕು. ಜಿಲ್ಲೆಗೆ ಉನ್ನತ ಶಿಕ್ಷಣಕ್ಕೆ ಬರುವ ಎಷ್ಟೋ ವೈದ್ಯ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಂಥ ದುಶ್ಚಟಗಳಿಗೆ ಬಲಿಯಾಗುತಿದ್ದಾರೆ. ಇದಕ್ಕೂ ನಿಜಕ್ಕೂ ಆತಂಕದ ವಿಚಾರ ಎಂದರು.
ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಲಕ್ಷ್ಮೀಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಆನಂದ್ ಶೆಟ್ಟಿ, ಜಿಲ್ಲಾ ಗೌರವ ಸಲಹೆಗಾರರಾದ ಪ್ರಕಾಶ್ ದೇವಾಡಿಗ ಹಾಗೂ ತೇಜಸ್ ರಾವ್, ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್, ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷ ಸಿದ್ದಣ್ಣ ಎಸ್. ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಸವೋರ್ತ್ತಮ, ಗಣೇಶ್ ಆಚಾರ್ಯ, ಅನಿಲ್, ಸುಕುಮಾರ್ ಇತರರು ಉಪಸ್ಥಿತರಿದ್ದರು.