ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯೂಜೆರ್ಸಿಯ ಮೇಯರ್ ನೀನಾ ಸಿಂಗ್ ಅವರು ಸುಗುಣೇಂದ್ರ ಶ್ರೀಗಳಿಗೆ ಪೌರಸನ್ಮಾನ ಪತ್ರದ ಲಕ ನೀಡಿದರು. ಪ್ರಸನ್ನ ಆಚಾರ್ಯ, ಡಾ. ಸುಧೀಂದ್ರ, ಪೂರ್ಣಿಮಾ, ಸುರೇಶ್ ವಸಿಷ್ಠ, ಚೇತನ್ ಭರ್ಗಿರಿ, ಯೋಗೀಂದ್ರ ಭಟ್, ಶ್ರೀವತ್ಸ ಬಲ್ಲಾಳ್, ನಮಹೇಶ್ ಹಾವೂರ್ ಇತರರಿದ್ದರು.
Published on:
Copied
Follow Us
* ಪುತ್ತಿಗೆ ಸುಗುಣೇಂದ ತೀರ್ಥ ಶ್ರೀಪಾದರ ಆಶೀರ್ವಚನ
* ಅಮೆರಿಕದ ನ್ಯೂಜೆರ್ಸಿಯಲ್ಲಿ ಅದ್ದೂರಿ ಪೌರ ಸನ್ಮಾನ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ತಮ್ಮ ಚತುರ್ಥ ಪರ್ಯಾಯದ ಬಳಿಕ ಪ್ರಥಮ ಬಾರಿಗೆ ಅಮೆರಿಕ ಪುರ ಪ್ರವೇಶ ಮಾಡಿದ ಪುತ್ತಿಗೆ ಮಠದ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ನ್ಯೂಜೆರ್ಸಿಯಲ್ಲಿ ಸೋಮವಾರ (ಜೂ.8) ಅದ್ದೂರಿ ಪೌರ ಸನ್ಮಾನದೊಂದಿಗೆ ಸ್ವಾಗತಿಸಲಾಯಿತು.
ಪುರ ಪ್ರವೇಶ ಮತ್ತು ಪೌರ ಸನ್ಮಾನ ಕಾರ್ಯಕ್ರಮವು ಎಡಿಸನ್ ನಗರದಲ್ಲಿರುವ ಪುತ್ತಿಗೆ ಮಠದ ಶ್ರೀಕೃಷ್ಣ ವೃಂದಾವನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು. ಇಲ್ಲಿಗೆ ಭೇಟಿ ನೀಡುವ ಮೊದಲು ಶ್ರೀಗಳು, ಲಂಡನ್ ಹಾಗೂ ಕೆನಡಾದ ಟೊರೆಂಟೋದಲ್ಲಿರುವ ತಮ್ಮ ಮಠಗಳಿಗೂ ಭೇಟಿ ನೀಡಿದ್ದರು.
ಅಮೆರಿಕದಲ್ಲಿರುವ ಪುತ್ತಿಗೆ ಮಠದ ಶಿಷ್ಯರು ಶ್ರೀಗಳನ್ನು ಸನ್ಮಾನಿಸಿದರು.
ನ್ಯೂಜೆರ್ಸಿ ಮೇಯರ್ ಭಾಗಿ
ನ್ಯೂಜೆರ್ಸಿಯ ಮೊಂಟುಗೊಮೆರಿ ಪಟ್ಟಣದ ಮೇಯರ್ ನೀನಾ ಸಿಂಗ್ ಮತ್ತು ಅವರ ಪತಿ ಪರಂಜಿತ್ ಸಿಂಗ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಪೌರ ಸನ್ಮಾನಕ್ಕೆ ಸ್ಥಳೀಯ ಸರ್ಕಾರದ ಸಂಪೂರ್ಣ ಸಹಕಾರ ನೀಡಿದರು. ಸನ್ಮಾನ ಪತ್ರ ವಾಚಿಸಿದ ಮೇಯರ್ ನೀನಾ ಸಿಂಗ್, ಪತ್ರ ಮತ್ತು ಫಲಕವನ್ನು ಶ್ರೀಗಳಿಗೆ ನೀಡಿ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.
ಶ್ರೀಗಳ ಆಶೀರ್ವಚನ
ಸುದೀರ್ಘ ಎರಡೂವರೆ ವರ್ಷದ ಬಳಿಕ ಅಮೆರಿಕದಲ್ಲಿರುವ ಕ್ಷೇತ್ರಕ್ಕೆ ಬಂದಿದ್ದು ತಮಗೆ ತವರು ಮನೆಗೆ ಬಂದಷ್ಟೇ ಸಂತಸವಾಗಿದೆ. ನಮ್ಮ ಚತುರ್ಥ ಪರ್ಯಾಯದ ಅವಧಿಯಲ್ಲಿ ಗಳಿಸಿದ ಪುಣ್ಯವನ್ನೆಲ್ಲ ಇದೀಗ ಜಗತ್ತಿನ್ನೆಲ್ಲೆಡೆ ಇರುವ ಶ್ರೀಕೃಷ್ಣನ ಭಕ್ತರಿಗೆ ಹಂಚಲು ಬಂದಿದ್ದೇನೆ. ನಿಮ್ಮ ಭಕ್ತಿಯನ್ನಿತ್ತು ಕೃಷ್ಣಭಕ್ತಿಯನ್ನು ಪಡೆಯಿರಿ. ಕೋಟಿ ಗೀತಾ ಲೇಖನ ಯಜ್ಞವನ್ನು ನಮ್ಮ ಮುಂದಿನ ಪಂಚಮ ಪರ್ಯಾಯ ಅವಧಿಯವರೆಗೂ ಮುಂದುವರಿಸುವ ಸಂಕಲ್ಪ ಮಾಡಿದ್ದೇವೆ. ಗೀತೆ ಬರೆದ ಹಲವಾರು ಭಕ್ತರು ತಮ್ಮ ಜೀವನದ ಪಥವನ್ನೇ ಬದಲಿಸಿಕೊಂಡಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದ ಸ್ಮಾರಕವಾಗಿ ನ್ಯೂಜೆರ್ಸಿ ಮಠದಲ್ಲಿ ಅಪೂರ್ವ ಯಜ್ಞಶಾಲೆ ನಿರ್ಮಾಣ ಮಾಡುವುದಾಗಿ ಶ್ರೀಗಳು ತಿಳಿಸಿದರು.
ಭಕ್ತರಿಂದ ಸನ್ಮಾನ
ಎಲ್ಲ ಭಕ್ತರ ಪರವಾಗಿ ಅಭಿಮಾನಿ ಶಿಷ್ಯರಾದ ಡಾ. ಸುಧೀಂದ್ರ, ಪೂರ್ಣಿಮಾ, ಉದ್ಯಮಿ ಸುರೇಶ್ ವಸಿಷ್ಠ, ಮೀನಾ ವಸಿಷ್ಠ, ಚೇತನ್ ಭರ್ಗಿರಿ ಇತರರು ಶ್ರೀಗಳಿಗೆ ಶಾಲು, ಹಾರ, ಪೇಟ ತೊಡಿಸಿ ಸನ್ಮಾನಿಸಿದರು.
ಯೋಗೀಂದ್ರ ಭಟ್ ಸ್ವಾಗತಿಸಿದರು. ಶ್ರೀವತ್ಸ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಮಹೇಶ್ ಹಾವೂರ್ ಅವರು ಶ್ರೀಗಳ ಸಾಧನೆ ವಿವರಿಸಿದರು. ಪ್ರಸನ್ನ ಆಚಾರ್ಯ ವಂದಿಸಿದರು. ಕಾರ್ಯಕ್ರಮದ ಬಳಿಕ ಭಕ್ತರು ಪ್ರಸಾದ ಸ್ವೀಕರಿಸಿದರು.
ಮರುದಿನ ಬೆಳಗ್ಗೆ ಅಧಿಕ ಮಾಸದ ನಿಮಿತ್ತ ಅನೇಕ ಭಕ್ತರಿಗೆ ಶ್ರೀಗಳು ತಪ್ತ ಮುದ್ರಾಧಾರಣೆ ನಡೆಸಿದರು.
ಸ್ವಾಗತಕ್ಕೆ ಕುದುರೆ ಸಾರೋಟು
ಯತಿಕುಲ ಚಕ್ರವರ್ತಿ ಬಿರುದಾಂಕಿತ ಸುಗುಣೇಂದ್ರ ಶ್ರೀಗಳು ಅಮೆರಿಕದ ಎಡಿಸನ್ ನಗರದ ರಸ್ತೆಗಳಲ್ಲಿ ಕುದುರೆ ಸಾರೋಟಿನಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಪೂರ್ಣಕುಂಭ, ಸ್ಯಾಕ್ಸೋಫೋನ್ ವಾದನ, ಕೊಳಲು, ಡೋಲಕ್, ಕೋಲಾಟ ನೃತ್ಯ ಮತ್ತು ವೇದಘೋಷದೊಂದಿಗೆ ಶ್ರೀಕೃಷ್ಣ ವೃಂದಾವನದ ಆವರಣಕ್ಕೆ ಆಗಮಿಸಿದರು. ಅಮೆರಿಕಾದಲ್ಲಿ ಧರ್ಮಸಂಸ್ಥಾಪನೆಯ ಅಡಿಗಲ್ಲು ಹಾಕಲು ಸಹಕರಿಸಿದ ಎಲ್ಲ ಭಕ್ತರೆದುರು ಮುಗುಳ್ನಗುತ್ತ, ಶಾಲಗ್ರಾಮ ಶಿಲಾರೂಪಿ ಶ್ರೀಕೃಷ್ಣನ ದರ್ಶನ ಮಾಡಿ ಮಂಗಳಾರತಿ ಬೆಳಗಿದರು. ಬಳಿಕ ಆನಂದ ತೀರ್ಥ ಮಂಟಪ ವೇದಿಕೆಯಲ್ಲಿದ್ದ ಸಿಂಹಾಸನದಲ್ಲಿ ಕುಳಿತು ಆಶೀರ್ವಚನ ನೀಡಿದರು.
"
ಅಧಿಕ ಮಾಸದ ಪರ್ವ ಕಾಲದಲ್ಲಿ ಅಮೆರಿಕದ ಪೂರ್ವ ಕರಾವಳಿಯ ಭಕ್ತರು ಶ್ರೀಗಳ ಭೇಟಿಯನ್ನು ತೀವ್ರ ಕಾತರದಿಂದ ಎದುರು ನೋಡುತ್ತಿದ್ದೆವು. ಶ್ರೀಗಳ ಈ ಭೇಟಿ ಅಮೆರಿಕದಲ್ಲಿರುವ ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿದೆ. 500ಕ್ಕೂ ಹೆಚ್ಚು ಜನರು ಈ ಸಂಭ್ರಮದಲ್ಲಿ ಪಾಲ್ಗೊಂಡಿರುವುದೇ ಸಾಕ್ಷಿ.
— ಪ್ರಸನ್ನ ಆಚಾರ್ಯ. ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ.