ಮಿದುಳಿನ ರಕ್ತಸ್ರಾವಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ

ನ್ಯೂರೋ ಸರ್ಜರಿ
ನ್ಯೂರೋ ಸರ್ಜರಿ
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ ನರರೋಗ ಶಸ್ತ್ರಚಿಕಿತ್ಸಾ ತಜ್ಞರು ನರಗಳ ಸಾಮಾನ್ಯ ಶಸ್ತ್ರಚಿಕಿತ್ಸೆ ಸೇರಿದಂತೆ ಮಿದುಳಿನ ಶಸ್ತ್ರಚಿಕಿತ್ಸೆ, ಬೆನ್ನುಹುರಿಯ ಶಸ್ತ್ರಚಿಕಿತ್ಸೆಗಳಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದರಿಂದಾಗಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೆ ಗ್ರಾಮೀಣ ಜನತೆ ದೂರದ ಮಂಗಳೂರಿಗೆ ಅಲೆದಾಡುವುದು ತಪ್ಪುತ್ತಿದೆ.
ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಅರುಣ್ ಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಅವರ ಕೋರಿಕೆಯಂತೆ 1.23 ಕೋಟಿ ರೂ. ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಬೇಕಾದ ಸೌಲಭ್ಯಗಳನ್ನು ಡಾ.ವೀರೇಂದ್ರ ಹೆಗ್ಗಡೆ ಅವರು ಒದಗಿಸಿದ್ದಾರೆ. ಸುಸಜ್ಜಿತವಾದ ಸೌಲಭ್ಯಗಳಿಂದಾಗಿ ಒಂದು ತಿಂಗಳಲ್ಲಿ ನರರೋಗಕ್ಕೆ ಸಂಬಂಧಿಸಿದ ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲದೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಾದ 8 ಮಿದುಳಿನ ಶಸ್ತ್ರಚಿಕಿತ್ಸೆ ಮತ್ತು ಒಂದು ಬೆನ್ನುಹುರಿಯ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ನಡೆಸಲಾಗಿದೆ.

ಮೆದುಳಿನ ರಕ್ತಸ್ರಾವಕ್ಕೆ ಶಸ್ತ್ರಚಿಕಿತ್ಸೆ

58 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ತಲೆ ತಿರುಗುವಿಕೆ, ಮೈಕೈಯಲ್ಲಿ ಸಾಮಾನ್ಯ ದೌರ್ಬಲ್ಯ, ವಾಂತಿ ಮತ್ತು ತೊದಲು ಮಾತು, ಎಡಗಾಲಿನ ದೌರ್ಬಲ್ಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಅರುಣ್ ಎಸ್. ರೋಗಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಮಿದುಳಿನಲ್ಲಿ ದ್ರವ ತುಂಬಿದ ಜಾಗದಲ್ಲಿ ರಕ್ತಸ್ರಾವವಾಗಿ ಮಿದುಳಿನ ನೀರು ಹರಿಯುವಿಕೆಗೆ ಅಡಚಣೆಯಾಗಿರುವುದು ಕಂಡು ಬಂದಿತ್ತು. ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.
ಓಮಯಾ ರಿಸರ್ವಾಯರ್ ಎಂಬ ಸಣ್ಣ ಉಪಕರಣ ಬಳಸಿ ಮಿದುಳಿನಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ದ್ರವ ಮತ್ತು ರಕ್ತ ತೆಗೆಯಲಾಯಿತು. ರೋಗಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ಪ್ರಸ್ತುತ ಆರೋಗ್ಯವಂತರಾಗಿದ್ದಾರೆ ಎಂದು ನ್ಯೂರೋ ಸರ್ಜನ್ ಡಾ.ಅರುಣ್ ಎಸ್. ತಿಳಿಸಿದರು.

ನುರಿತ ವೈದ್ಯರ ತಂಡದಿಂದ ಯಶಸ್ವಿ ಚಿಕಿತ್ಸೆ

ನ್ಯೂರೋ ಪರೀಕ್ಷೆಗಾಗಿ ಸಿಟಿ ಸ್ಕಾೃನ್ ವ್ಯವಸ್ಥೆ ಇದ್ದು, ಅತ್ಯಾಧುನಿಕ ಎಐ ಆಧಾರಿತ ಸೀಮೆನ್ಸ್ ಎಂಆರ್‌ಐ ಸ್ಕಾೃನ್ ಕೂಡ ಇತ್ತೀಚೆಗೆ ಅಳವಡಿಸಲಾಗಿದೆ. ಇದಲ್ಲದೆ ನ್ಯೂರೋ ಸರ್ಜರಿಗಾಗಿ ಮಾಡ್ಯುಲರ್ ಓಟಿ, ಶಸ್ತ್ರಚಿಕಿತ್ಸೆಗೆ ಅವಶ್ಯಕವಾದ ಅತ್ಯಾಧುನಿಕ ಮೈಕ್ರೋಸ್ಕೋಪಿ, ಕ್ಯೂಸಾ ಯಂತ್ರ ಮತ್ತು ಡ್ರಿಲ್ ಯಂತ್ರಗಳಿವೆ. ನ್ಯೂರೋ ತಜ್ಞ ವೈದ್ಯರು, ಅನುಭವಿ ಅರಿವಳಿಕೆ ತಜ್ಞರು ಮತ್ತು ಓಟಿ, ಐಸಿಯು ತಂತ್ರಜ್ಞರು ಹಾಗೂ ನುರಿತ ದಾದಿಯರ ತಂಡ ಆಸ್ಪತ್ರೆಯಲ್ಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net