ಯುವ ಲೆಕ್ಕ ಪರಿಶೋಧಕಿ ನಿರೀಕ್ಷಾ ನಾವರ ಇನ್‌ಸ್ಪೈಯರ್ ವಿದ್ವತ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಇ.ಎಂ. ಮೊದಲಾದವರಿದ್ದರು.
ಬೆಳ್ತಂಗಡಿ: ಪರಿಶ್ರಮ ಹಾಗೂ ಪರಿವರ್ತನೆಯಿಂದ ನಾವು ಅಂದುಕೊಂಡ ಗುರಿ ನಮ್ಮೆಡೆಗೇ ಸಾಗಿ ಬರಬಹುದು. ಸಿಎ ಓದುವ ಹಂತದಲ್ಲಿ ನಿಖರ ಹಾಗೂ ನಿರಂತರ ಅಭ್ಯಾಸ ಬಹಳ ಮುಖ್ಯ. ಪಠ್ಯ ಅಧ್ಯಯನ, ಸೂಕ್ತ ಮಾರ್ಗದರ್ಶನ, ಸಂಶೋಧನಾತ್ಮಕ ಅಭ್ಯಾಸ ಅತ್ಯಗತ್ಯ ಎಂದು ಯುವ ಲೆಕ್ಕ ಪರಿಶೋಧಕಿ ನಿರೀಕ್ಷಾ ನಾವರ ಹೇಳಿದರು.
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಇನ್‌ಸ್ಪೈರ್ ವಿದ್ವತ್ ಎಂಬ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧನೆಗೆ ವೇದಿಕೆ ಕಲ್ಪಿಸುವಲ್ಲಿ ವಿದ್ವತ್ ಎಲ್ಲ ರೀತಿಯ ಶೈಕ್ಷಣಿಕ ಉತ್ತೇಜನವನ್ನು ನೀಡುತ್ತಿದೆ. ಅದನ್ನು ಬಳಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ. ಅವಕಾಶಗಳು ನಮ್ಮನ್ನು ಅರಸಿ ಬರುವುದಿಲ್ಲ. ಅವುಗಳನ್ನು ಅರಸಿ ನಾವು ಪೂರ್ವತಯಾರಿ ನಡೆಸಬೇಕು ಎಂದರು.
ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಇ.ಎಂ., ಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್ ರೈ, ಟ್ರಸ್ಟಿ ಕಾಶಿನಾಥ್ ಎಂ.ಕೆ., ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಯೋಜಕಿ ಡಾ.ಮಹಿತಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸ್ಪಂದನ್ ಶೆಟ್ಟಿ ಸ್ವಾಗತಿಸಿದರು. ಮೈಲಾರ್ ಕಾಳಿಂಗೇಶ್ವರ್ ಚಿಳ್ಳಾಲೆ ಅತಿಥಿ ಪರಿಚಯ ಮಾಡಿದರು. ಭುವಿ ಎಸ್.ಹೆಗಡೆ ನಿರೂಪಿಸಿದರು.