ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭವನ್ನು ಡಾ.ಸತೀಶ್ಚಂದ್ರ ಎಸ್. ಉದ್ಘಾಟಿಸಿದರು. ಡಾ.ಶಶಾಂಕ ಕುಳಮರ್ವ, ಪ್ರೊ.ವಿಶ್ವನಾಥ್ ಪಿ., ಶ್ರೇಯಸ್ ಬಿ. ಮೊದಲಾದವರು ಉಪಸ್ಥಿತರಿದ್ದರು.
ಬೆಳ್ತಂಗಡಿ: ನಾವು ಎಷ್ಟು ಎತ್ತರಕ್ಕೆ ಬೆಳೆಯುತ್ತೇವೆ ಮತ್ತು ಹೇಗೆ ಸಾಧನೆಯ ಹಾದಿಯಲ್ಲಿ ಸಾಗುತ್ತೇವೆ ಎಂಬುದನ್ನು ನಮ್ಮೊಳಗಿನ ನಿರಂತರವಾದ ಪ್ರಯತ್ನಶೀಲತೆ, ದೃಢತೆ, ನಂಬಿಕೆ ಮತ್ತು ಸ್ವಸಾಮರ್ಥ್ಯ ನಿರ್ಧರಿಸುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.
ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸ್ಟೂಡೆಂಟ್ಸ್ ಕೌನ್ಸಿಲ್ ವತಿಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ‘ಸ್ಟೂಡೆಂಟ್ ಆಕ್ಟಿವಿಟಿ ಫೋರಂ’ ಶೈಕ್ಷಣಿಕ ಚಟುವಟಿಕೆಗಳ 12 ವಿವಿಧ ಸಂಘಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಹಳೇ ವಿದ್ಯಾರ್ಥಿ, ಜಪಾನ್‌ನ ಸಂಶೋಧಕ ಡಾ.ಶಶಾಂಕ ಕುಳಮರ್ವ ಮಾತನಾಡಿ, ಕಲಿಕೆಗೆ ಯಾವುದೇ ಗಡಿ ಇಲ್ಲ. ಕಂಫರ್ಟ್ ಜೋನ್ ಬಿಟ್ಟು ಹೊರ ಬರದಿದ್ದರೆ ಹೊಸತನವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದರು.
ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ. ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ರಚಿಸಿದ ಚಿಗುರು ಮಾಸ ಪತ್ರಿಕೆ ಹಾಗೂ ಛಾಯಾಚಿತ್ರಗಳ ಭಿತ್ರಿಪತ್ರಿಕೆ ಅನಾವರಣಗೊಳಿಸಲಾಯಿತು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೇಯಸ್ ಬಿ., ವಿವಿಧ ವಿಭಾಗಗಳ ವಿದ್ಯಾರ್ಥಿ ಸಂಯೋಜಕರಾದ ರಂಜನ್, ನೆವಿಲ್ ನವೀನ್ ಮೋರಸ್, ಭವಿಷಿತ್, ಪವನ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕವನಾ, ಅನ್ವಿತಾ ನಿರೂಪಿಸಿದರು. ನೆವಿಲ್ ನವೀನ್ ಮೋರಸ್ ವಂದಿಸಿದರು. ಉಪನ್ಯಾಸಕ ಶ್ರೇಯಸ್ ಬಿ. ಕಾರ್ಯಕ್ರಮ ಸಂಯೋಜಿಸಿದ್ದರು.