ಪಂಜರದ ‘ಕಳಸೆ’ ಮೀನಿಗೆ ಯಶಸ್ಸು

 ತಲ್ಲೂರಿನಲ್ಲಿ ಪಂಜರ ಮೀನು ಕೃಷಿಯಲ್ಲಿ ಬೆಳೆದ ‘ಕಳಸೆ’ ಮೀನು.
ತಲ್ಲೂರಿನಲ್ಲಿ ಪಂಜರ ಮೀನು ಕೃಷಿಯಲ್ಲಿ ಬೆಳೆದ ‘ಕಳಸೆ’ ಮೀನು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಪಂಜರ ಮೀನು ಕೃಷಿ ಮೀನುಗಾರರು ಹಾಗೂ ನಿರುದ್ಯೋಗಿ ಯುವ ಸಮುದಾಯವನ್ನು ಆಕರ್ಷಿಸುತ್ತಿದೆ. ಕಳೆದ 3 ವರ್ಷಗಳಿಂದ ಎಸ್‌ಸಿಎಸ್‌ಪಿ ಯೋಜನೆಯಲ್ಲಿ ಕುಂದಾಪುರ ತಾಲೂಕು ತಲ್ಲೂರಿನ ಪ.ಜಾತಿ ಸಮುದಾಯದ ಆರು ಕುಟುಂಬಗಳು ಪಂಜರ ಮೀನು ಕೃಷಿಯಲ್ಲಿ ಈ ಬಾರಿ ‘ಕಳಸೆ’ ಮೀನು ಬೆಳೆದು ಯಶಸ್ವಿಯಾಗಿದ್ದಾರೆ.

ಏನಿದು ಯೋಜನೆ?

ಪರಿಶಿಷ್ಟ ಜಾತಿ ಉಪಯೋಜನೆಯಡಿ(ಎಸ್‌ಸಿಎಸ್‌ಪಿ), ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ(ಸಿ.ಎಂ.ಎಫ್.ಆರ್.ಐ) ಮಂಗಳೂರು ಪ್ರಾದೇಶಿಕ ಕೇಂದ್ರ ಅನುಷ್ಠಾನಗೊಳಿಸಿದ ಪಂಜರ ಮೀನು ಕೃಷಿ ಪಂಜರದಲ್ಲಿ ಮೀನು ಸಾಕುವುದಕ್ಕೆ ಉತ್ತೇಜನ ನೀಡುತ್ತಿದೆ. ತಲ್ಲೂರಿನ ಯೋಗೀಶ್, ಸದಾನಂದ, ಪವಿತ್ರಾ, ಯಮುನಾ, ಇಂದಿರಾ ಹಾಗೂ ಮಂಜುನಾಥ್ ಈ ಯೋಜನೆ ಫಲಾನುಭವಿಗಳಾಗಿದ್ದು, ಪಂಜರದಲ್ಲಿ ಕಳಸೆ ಮೀನು ಸಾಕಿ ಯಶಸ್ವಿಯಾಗಿದ್ದಾರೆ. ಇದರ ಯಶಸ್ಸಿಗೆ ಸಿ.ಎಂ.ಎಫ್.ಆರ್.ಐ ಮಂಗಳೂರು ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿಗಳಾದ ಡಾ.ರಾಜೇಶ್ ಕೆ.ಎಂ., ಡಾ.ಸುಜಿತಾ ಥಾಮಸ್, ಡಾ.ಬಿಂದು ಸುಲೋಚನನ್, ಹಿರಿಯ ವಿಜ್ಞಾನಿಗಳಾದ ಡಾ.ಪುರುಷೋತ್ತಮ, ಡಾ.ದಿವ್ಯಾ ವಿಶ್ವಂಬರನ್ ಹಾಗೂ ವಿಜ್ಞಾನಿ ಡಾ.ಸುನೀಲ್ ಮೊದಲಾದವರು ಸಹಕರಿಸಿದ್ದಾರೆ.

10 ತಿಂಗಳು ಮೀನು ಸಾಕಣೆ

ಎಸ್‌ಸಿಎಸ್‌ಪಿ ಯೋಜನೆಯಡಿ ಸಿಎಂಎಫ್‌ಆರ್‌ಐ ಮಾರ್ಗದರ್ಶನದಲ್ಲಿ ತಲ್ಲೂರಿನ 6 ಪ.ಜಾತಿ ಕುಟುಂಬಗಳ 18-20 ಮಂದಿ ತಲ್ಲೂರು ನದಿಯಲ್ಲಿ 2 ಪಂಜರಗಳನ್ನಿಟ್ಟು ಅರ್ಧ ಗ್ರಾಂ ತೂಕದ 1,500 ಮೀನು ಮರಿಗಳನ್ನು ಬಿಡಲಾಗಿತ್ತು. ಕಳೆದ ವಾರ ಮೀನುಗಳನ್ನು ಮೇಲಕ್ಕೆತ್ತುವ ಪ್ರಕ್ರಿಯೆ ನಡೆದಿದ್ದು 150 ಗ್ರಾಂನಿಂದ 200-250 ಗ್ರಾಂ ತೂಕದವರೆಗೆ ಮೀನು ಬೆಳೆದಿವೆ. 3 ವರ್ಷಗಳಿಂದ ಪಂಜರ ಮೀನು ಕೃಷಿ ಮಾಡುತ್ತಿದ್ದು ನಿರೀಕ್ಷಿತ ಆದಾಯ ಬರುತ್ತಿದೆ. ಮುಂದೆಯೂ ಪಂಜರ ಕೃಷಿ ಮಾಡುತ್ತೇವೆ ಎಂದು ಮೀನುಗಾರ ಯೋಗೀಶ್ ತಲ್ಲೂರು ತಿಳಿಸಿದ್ದಾರೆ.


ಕೇರಳದ ರಾಜ್ಯ ಮೀನು ‘ಕಳಸೆ’!

ಉಡುಪಿ, ಕುಂದಾಪುರ ಭಾಗದಲ್ಲಿ ‘ಕಳಸೆ’, ಮಂಗಳೂರಿನಲ್ಲಿ ‘ಇರ್ಪೆ’, ಇಂಗ್ಲಿಷ್‌ನಲ್ಲಿ ‘ಪರ್ಲ್ ಸ್ಪಾಟ್ ಫಿಶ್’ ಎಂದು ಕರೆಯಲ್ಪಡುವ ಈ ಮೀನು ‘ಕರಿಮೀನ್’ ಹೆಸರಿನಲ್ಲಿ ಕೇರಳದ ರಾಜ್ಯ ಮೀನಾಗಿದೆ. ಹಿನ್ನೀರು, ಅಳಿವೆಗಳಲ್ಲಿ ಇವು ಸಿಗುತ್ತವೆ. ಈ ಮೀನನ್ನು ನದಿಯಲ್ಲಿ ಪಂಜರದೊಳಗಿಟ್ಟು ಕೃತಕ ಆಹಾರ ನೀಡಿ ಸಾಕಿದ್ದು ಅಪರೂಪವಾಗಿದ್ದು, ಈ ಪ್ರಯೋಗ ಯಶಸ್ವಿಯಾಗಿದೆ. ಕೇರಳ ಹಾಗೂ ಗೋವಾ ಸಹಿತ ಸ್ಥಳೀಯ ಮಾರುಕಟ್ಟೆಯಲ್ಲಿ ಕಳಸೆಗೆ ಬೇಡಿಕೆಯಿದೆ. 1 ಕಿಲೋಗ್ರಾಂಗೆ 350- 400 ರೂಪಾಯಿ ಮಾರುಕಟ್ಟೆ ಬೆಲೆಯಿದೆ.

ಉಪ್ಪುಂದದಲ್ಲಿ 2008-09ರಲ್ಲಿ ಎರಡು ಪಂಜರಗಳನ್ನಿಟ್ಟು ಆರಂಭಿಸಿದ ಮೀನು ಕೃಷಿ, ಕರಾವಳಿ ಕರ್ನಾಟಕ ವ್ಯಾಪಿಸಿ ಇದೀಗ ಅಂದಾಜು 1,000 ಪಂಜರ ಕೃಷಿ ನಡೆಯುತ್ತಿದೆ. ಈ ಬಾರಿ ಹೊಸ ಪ್ರಯೋಗವಾಗಿ ಕಳಸೆ ಮೀನು ಕೃಷಿಗೆ ಎಸ್‌ಸಿಎಸ್‌ಪಿ ಯೋಜನೆಯಡಿ 6 ಮಂದಿ ಫಲಾನುಭವಿಗಳು ಮುಂದೆ ಬಂದಿದ್ದು 10 ತಿಂಗಳ ಅವಧಿಯಲ್ಲಿ ಮೀನುಗಳ ತೂಕ ಉತ್ತಮ ಗುಣಮಟ್ಟದ್ದಾಗಿದೆ.

ಸಿ.ಎಂ.ಎಫ್.ಆರ್.ಐ ಪ್ರಾದೇಶಿಕ ಕೇಂದ್ರದ ಮಾರ್ಗದರ್ಶನದಲ್ಲಿ 12 ವರ್ಷಗಳಿಂದ ಪಂಜರ ಮೀನು ಕೃಷಿ ಮಾಡುತ್ತಿದ್ದು, ಕೆಂಬೇರಿ, ಕುರುಡಿ, ಸಿಲ್ವರ್ ಹಾಗೂ ಇಂಡಿಯನ್ ಪಂಪೆನೋ ಮೀನು, ಪಚ್ಚಿಲೆ ಕೃಷಿ ಮಾಡಿ ಯಶಸ್ವಿಯಾಗಿದ್ದೇನೆ. ಹೊಸ ಆವಿಷ್ಕಾರಗಳ ಮೂಲಕ ಉತ್ತಮ ಆದಾಯ ಲಭಿಸುತ್ತದೆ. ನಿರುದ್ಯೋಗಿ ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪಂಜರ ಕೃಷಿಯಿಂದ ಸಾಧ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net