

ಉಡುಪಿ: ವಿಶ್ವದಲ್ಲಿಯೇ ಗರಿಷ್ಠ ವಿದ್ಯಾರ್ಥಿಗಳನ್ನು ಹೊಂದಿರುವ ರಾಷ್ಟ್ರ ನಮ್ಮ ಭಾರತ. ಉಡುಪಿ ಜಿಲ್ಲೆಯು ರಾಜ್ಯದ ಪ್ರಥಮ ಸಂಪೂರ್ಣ ಸಾಕ್ಷರತಾ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗೌರವಕ್ಕೆ ಜಿಲ್ಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಶ್ರಮವೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ನಿಮಾರ್ಣದ ಸಂಕಲ್ಪಕ್ಕೆ ವಿದ್ಯಾರ್ಥಿಗಳೇ ಪ್ರೇರಣೆಯಾಗಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿಮತ ವ್ಯಕ್ತಪಡಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ನ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ನಿಮಿತ್ತ ಪುಷ್ಪಾನಂದ ಫೌಂಡೇಷನ್ ವತಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ಸುಮಾರು 20 ಸಾವಿರ ಪೆನ್ ವಿತರಣೆ ಕಾರ್ಯಕ್ರಮಕ್ಕೆ ಕಡೆಕಾರು ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಶನಿವಾರ (ನ.14) ಚಾಲನೆ ನೀಡಿ ಮಾತನಾಡಿದರು.
ಶೈಕ್ಷಣಿಕ ಅಭಿವೃದ್ಧಿ
ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶಾಲಾ-ಕಾಲೇಜ್ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿ ನಿಲಯ ಹಾಗೂ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಗಳ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡುವತ್ತ ನಿರಂತರ ಕಾರ್ಯಪ್ರವೃತ್ತನಾಗಿದ್ದೇನೆ ಎಂದರು.
ಉಡುಪಿ ಕ್ಷೇತ್ರದ ವಿವಿಧ ಶಾಲೆ ಹಾಗೂ ಕಾಲೇಜ್ಗಳಿಗೆ ಸ್ಥಳಿಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳೊಂದಿಗೆ ತೆರಳಿ ವಿದ್ಯಾರ್ಥಿಗಳಿಗೆ ಪೆನ್ ವಿತರಿಸಿ ಶುಭ ಹಾರೈಸಿದರು.
ಸ್ಥಳೀಯ ಮುಖಂಡರಾದ ರಘುನಾಥ ಕೋಟ್ಯಾನ್, ಗಂಗಾಧರ ಜಿ., ಪ್ರದೀಪಚಂದ್ರ ಕುತ್ಪಾಡಿ, ಸುನೀಲ ಸಾಲ್ಯಾನ್, ಶೇಖರ ಅಂಚನ್, ದೀಪಕ ಪುತ್ರನ್, ಜಯಕರ ಸನಿಲ್, ನಂದಕುಮಾರ, ವನಜಾ ಜಯಕರ, ವಿನೋದಿನಿ, ಅರುಣ ಕಡೆಕಾರು, ಅಶೋಕ ಪಾಲನ್, ಶಾಲೆಯ ಮುಖ್ಯೋಧ್ಯಾಪಕಿ ವನಜಾಕ್ಷಿ ಉಪಸ್ಥಿತರಿದ್ದರು.