ಕೊಳೆರೋಗ ನಿಯಂತ್ರಣಕ್ಕೆ ಹರಸಾಹಸ

ಹವಾಮಾನ ವೈಪರೀತ್ಯದಿಂದಾಗಿ ಉದುರುತ್ತಿರುವ ಅಡಿಕೆ.
ಹವಾಮಾನ ವೈಪರೀತ್ಯದಿಂದಾಗಿ ಉದುರುತ್ತಿರುವ ಅಡಿಕೆ.
Published on

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಅಡಕೆ ಬೆಳೆಗಾರರನ್ನು ಮತ್ತೆ ಆತಂಕಕ್ಕೆ ತಳ್ಳಿದೆ. ತಿಂಗಳ ಹಿಂದೆ ಸುರಿಯಬೇಕಿದ್ದ ಮಳೆ ಈಗ ಸುರಿಯುತ್ತಿರುವ ಪರಿಣಾಮ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಒಟ್ಟು ಬೆಳೆಯಲ್ಲಿ ಸುಮಾರು ಶೇ.20ರಷ್ಟು ಬೆಳೆ ಕೊಳೆರೋಗಕ್ಕೆ ತುತ್ತಾಗಿದೆ. ಸತತ ಮಳೆ ಮುಂದುವರಿದರೆ ರೋಗದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂಬ ಆತಂಕ ಬೆಳೆಗಾರರಲ್ಲಿದೆ.
ಎರಡು ಸುತ್ತಿನ ಸಿಂಪಡಣೆ ಬಳಿಕ ಮತ್ತೆ ಬೋರ್ಡೋ ಸಿದ್ಧತೆ: ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಬಹುತೇಕ ಅಡಕೆ ಬೆಳೆಗಾರರು ಈಗಾಗಲೇ ಎರಡು ಬಾರಿ ಬೋರ್ಡೋ ದ್ರಾವಣ ಸಿಂಪಡಿಸಿದ್ದರು. ಮಳೆ ಕೊರತೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಮೂರನೇ ಸುತ್ತಿನ ಸಿಂಪಡಣೆ ಅಗತ್ಯವಿಲ್ಲ ಎಂದು ಹಲವು ಕೃಷಿಕರು ಭಾವಿಸಿದ್ದರು.
ಆದರೆ ಕಳೆದೊಂದು ವಾರದಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿ ಬದಲಾಗಿದೆ. ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೂರನೇ ಸುತ್ತಿನ ಬೋರ್ಡೋ ದ್ರಾವಣ ಸಿಂಪಡಣೆಗೆ ಬೆಳೆಗಾರರು ಸಿದ್ಧತೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಬೋರ್ಡೋ ದ್ರಾವಣ ಸಿಂಪಡಣೆಗೆ ಹವಾಮಾನ ವೈಪರೀತ್ಯ ಕಾರಣವಾಗಿದ್ದು, ಸಿಂಪಡಣೆಯ ಸಂದರ್ಭ 15 ನಿಮಿಷ ಜೋರಾಗಿ ಮಳೆ ಸುರಿದರೆ ಅಡಕೆ ಗೊನೆ ಶುಷ್ಕವಾಗಲು ಮತ್ತೆ ಹದಿನೈದು ನಿಮಿಷ ಕಾಲಾವಕಾಶ ಬೇಕಾಗುತ್ತದೆ. ಬಿಟ್ಟು ಬಿಟ್ಟು ಮಳೆ ಬರುತ್ತಿರುವ ಕಾರಣ ಸಿಂಪಡಣೆಗೆ ಅವಕಾಶವೇ ಇಲ್ಲದಂತಾಗಿದೆ. ತಜ್ಞರ ಪ್ರಕಾರ ಮೊದಲ ಅವಧಿಯ ಸಿಂಪಡಣೆಯ 30 ದಿನದಲ್ಲಿ ಎರಡನೇ ಸುತ್ತಿನ ಸಿಂಪಡಣೆಯನ್ನು ಮಾಡಲೇಬೇಕಾಗುತ್ತದೆ.
ಕಳೆದ ವರ್ಷದ ಕೊಳೆರೋಗದ ಅನುಭವದ ಬೆನ್ನಲ್ಲೇ ಈ ಬಾರಿಯೂ ಮಳೆಯ ಸ್ವರೂಪದಲ್ಲಿ ಆಗಿರುವ ಬದಲಾವಣೆ ಅಡಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಮಳೆ ಯಾವಾಗ, ಎಷ್ಟು ಪ್ರಮಾಣದಲ್ಲಿ ಬರುತ್ತದೆ ಎಂಬ ಅನಿಶ್ಚಿತತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರೋಗ ನಿಯಂತ್ರಣ, ಪರ್ಯಾಯ ಬೆಳೆ ಮತ್ತು ಬೆಳೆಗಾರರ ಆದಾಯ ಭದ್ರತೆ ಈ ಮೂರು ವಿಚಾರಗಳನ್ನೂ ಒಟ್ಟಾಗಿ ಪರಿಗಣಿಸುವ ಅಗತ್ಯ ಎದುರಾಗಿದೆ.

ಪರ್ಯಾಯ ಬೆಳೆ ಅವಶ್ಯಕ

ನಿರಂತರ ಮಳೆಯಿಂದ ಅಡಕೆ ತೋಟಗಳಿಗೆ ಕೊಳೆರೋಗ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಒಂದೇ ಬೆಳೆಯನ್ನು ನಂಬಿಕೊಂಡಿರುವ ಅಡಕೆ ಕೃಷಿಕರು ಪರ್ಯಾಯ ಬೆಳೆಗಳತ್ತ ಗಮನ ಹರಿಸಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕೊಳೆರೋಗದಂತಹ ಸಮಸ್ಯೆಗಳು ಎದುರಾದ ಸಂದರ್ಭದಲ್ಲೂ ಉಪಬೆಳೆಗಳು ರೈತರ ಆದಾಯಕ್ಕೆ ಆಸರೆಯಾಗಬಹುದು ಎಂಬ ಅಭಿಪ್ರಾಯವನ್ನು ತಜ್ಞರು ಈ ಹಿಂದೆಯೇ ವ್ಯಕ್ತಪಡಿಸಿದ್ದರು. ಆದರೆ ಅಡಕೆ ತೋಟಗಳಲ್ಲಿ ಯಾವ ಪರ್ಯಾಯ ಅಥವಾ ಉಪಬೆಳೆಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಬಹುದು. ಅವುಗಳಿಂದ ಎಷ್ಟು ಆದಾಯ ನಿರೀಕ್ಷಿಸಬಹುದು ಎಂಬ ಬಗ್ಗೆ ಬಹುತೇಕ ಬೆಳೆಗಾರರಿಗೆ ಇನ್ನೂ ಸ್ಪಷ್ಟ ಮಾರ್ಗದರ್ಶನದ ಕೊರತೆಯಿದೆ.

ಎಲ್ ನಿನೋ ಕಾರಣದಿಂದ ಮಳೆ ಕಡಿಮೆ ಎಂಬ ಬಗ್ಗೆ ಹವಾಮಾನ ಇಲಾಖೆ ಹೇಳಿತ್ತು. ಆದರೆ ಇದೀಗ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಲವು ಕಡೆ ಅಡಕೆಗೆ ಕೊಳೆರೋಗ ಕಾಣಿಸಿಕೊಂಡಿದೆ. ಕಳೆದ ಸಲವೂ ಕೊಳೆರೋಗವೂ ಹೆಚ್ಚಾಗಿ ಕಂಡಿತ್ತು. ಹೀಗಾಗಿ ಅಡಕೆ ಬೆಳೆಗಾರರ ವಲಯದಲ್ಲಿ ಈಗ ಆತಂಕಕ್ಕೆ ಕಾರಣವಾಗುತ್ತಿದೆ.

— ಮಹೇಶ್ ಪುಚ್ಚಪ್ಪಾಡಿ ಅಧ್ಯಕ್ಷರು, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘ

ಮೋಡ ಬಿಸಿಲು ಮತ್ತು ಮಳೆ ಜತೆಯಾದ ಕಾರಣ ಕೊಳೆರೋಗ ಉಂಟಾಗಿದ್ದು, ಹವಾಮಾನ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೊಳೆರೋಗ ಹೆಚ್ಚಾಗುವ ಸಾಧ್ಯತೆ ಇದೆ. ಜೋರಾಗಿ ಮಳೆ ಸುರಿದ ನಂತರ 10ರಿಂದ 15 ನಿಮಿಷ ಅಡಕೆ ಗೊನೆ ಒಣಗಿ ಮದ್ದು ಸಿಂಪಡಣೆಗೆ ಅವಕಾಶ ಇದ್ದರೂ ಈ ಸಮಯದಲ್ಲಿ ಕೊಳೆರೋಗಕ್ಕೆ ಕಾರಣವಾದ ಫಂಗಸ್ ತ್ವರಿತವಾಗಿ ಹರಡುತ್ತಿದೆ. ಫಂಗಸ್ ನಿಯಂತ್ರಣವೇ ಕೃಷಿಕರಿಗೆ ಸವಾಲಾಗಿದೆ. ಹಲವು ಸವಾಲುಗಳ ನಡುವೆ ಬೆಳೆ ಉಳಿಸಿಕೊಳ್ಳುವುದು ಹೇಗೆಂಬುದೇ ಕೃಷಿಕನ ಪ್ರಶ್ನೆಯಾಗಿದೆ.

— ಪ್ರಶಾಂತ್ ಶಬರಾಯ ಗುಂಡಿಮಾರು ಪ್ರಗತಿಪರ ಕೃಷಿಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net