ಕರಾವಳಿಯಲ್ಲಿ ಆಗಲೇಬೇಕು ಹೈಕೋರ್ಟ್​ ಪೀಠ

ಉಡುಪಿಯಲ್ಲಿ ಆಯೋಜಿಸಿದ್ದ ಹಕ್ಕೊತ್ತಾಯ ಸಭೆಯಲ್ಲಿ ಕೆ. ಜಯಪ್ರಕಾಶ್​ ಹೆಗ್ಡೆ ಮಾತನಾಡಿದರು. ಪ್ರೇಮಪ್ರಸಾದ್​ ಶೆಟ್ಟಿ, ಡಾ. ಪಿ.ವಿ. ಭಂಡಾರಿ, ಶ್ಯಾಮಲಾ ಭಂಡಾರಿ, ಶ್ರೀನಾಥ್​ ರಾವ್​, ಡಾ. ಸಬಿತಾ ಕೊರಗ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಹಕ್ಕೊತ್ತಾಯ ಸಭೆಯಲ್ಲಿ ಕೆ. ಜಯಪ್ರಕಾಶ್​ ಹೆಗ್ಡೆ ಮಾತನಾಡಿದರು. ಪ್ರೇಮಪ್ರಸಾದ್​ ಶೆಟ್ಟಿ, ಡಾ. ಪಿ.ವಿ. ಭಂಡಾರಿ, ಶ್ಯಾಮಲಾ ಭಂಡಾರಿ, ಶ್ರೀನಾಥ್​ ರಾವ್​, ಡಾ. ಸಬಿತಾ ಕೊರಗ ಇದ್ದರು.
Published on

* ಮಾಜಿ ಸಂಸದ ಜಯಪ್ರಕಾಶ್​ ಹೆಗ್ಡೆ ಅನಿಸಿಕೆ

*  ಉಡುಪಿಯಲ್ಲಿ ಹೋರಾಟ ಸಮಿತಿಯಿಂದ ಹಕ್ಕೊತ್ತಾಯ ಸಭೆ 

ಉಡುಪಿ: ಉಡುಪಿ ಜಿಲ್ಲೆಗೆ ಹೈಕೋರ್ಟ್​ ಪೀಠ ಹಾಗೂ ಸರ್ಕಾರಿ ಮೆಡಿಕಲ್​ ಕಾಲೇಜಿನ ಅಗತ್ಯತೆ ಇದೆ. ಮೆಡಿಕಲ್​ ಕಾಲೇಜ್​ ಆದರೆ ರೋಗಿಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯ ಸೇವೆ ಲಭಿಸಲಿದೆ. ಹೈಕೋರ್ಟ್​ ಪೀಠ ರಚನೆಯಾದರೆ ಮೂರು ಜಿಲ್ಲೆಗಳ ಕಕ್ಷಿದಾರರಿಗೆ ತ್ವರಿತ ನ್ಯಾಯ ಸಿಗಲಿದೆ. ಬೆಂಗಳೂರಿಗೆ ಅಲೆಯುವ ಕಾಟ ತಪ್ಪಲಿದ್ದು, ಸಮಯ ಹಾಗೂ ಹಣವೂ ಉಳಿತಾಯ ಆಗಲಿದೆ. ನ್ಯಾಯ ಸಿಗಲು ವಿಳಂಬವಾದರೆ ಕಕ್ಷಿದಾರರಿಗೆ ಅಪಾರ ನಷ್ಟ ಆಗಲಿದೆ. ಹೀಗಾಗಿ ಮುಲ್ಕಿ-ಪಡುಬಿದ್ರಿ ಮಧ್ಯಭಾಗದಲ್ಲಿ ಕರಾವಳಿ ಹೈಕೋರ್ಟ್​ ಪೀಠ ಸ್ಥಾಪನೆಯಾಗಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್​ ಹೆಗ್ಡೆ ಹೇಳಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕರಾವಳಿ ಹೈಕೋರ್ಟ್​ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ಜಿಲ್ಲಾ ಮಟ್ಟದ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಶನಿವಾರ (ಆ.22) ಸಂಜೆ ಆಯೋಜಿಸಿದ್ದ 'ಕರಾವಳಿ ಹೈಕೋರ್ಟ್​ ಪೀಠಕ್ಕೆ ಆಗ್ರಹಿಸಿ ಹಕ್ಕೊತ್ತಾಯ ಸಭೆ'ಯಲ್ಲಿ ಮಾತನಾಡಿದರು.

ಮುಲ್ಕಿಯಲ್ಲಿದೆ ಸೂಕ್ತ ಸ್ಥಳ

ದ ಅಧ್ಯಕ್ಷ ಜಗದೀಶ್​ ಮಾತನಾಡಿ, ಹೈಕೋರ್ಟ್​ ಪೀಠ ಬೇಕೆಂಬ ಒತ್ತಾಯ ಬಹಳ ಹಿಂದಿನದು. ಶಿವಮೊಗ್ಗ ಜಿಲ್ಲೆಯವರ ಹೋರಾಟದಿಂದಾಗಿ ಕರಾವಳಿಯಲ್ಲಿ ನನೆಗುದಿಗೆ ಬಿದ್ದಿದ್ದೆ. ಅದು ಉಡುಪಿಯಲ್ಲಿ ಅಥವಾ ಮಂಗಳೂರಿನಲ್ಲೇ ಆಗಬೇಕೆಂಬ ಕುರಿತು ನಮ್ಮ ನಮ್ಮಲ್ಲಿಯೇ ಸಂಘರ್ಷವೂ ಇಲ್ಲ. ಮುಲ್ಕಿಯಲ್ಲಿ ಸುಮಾರು 50 ಎಕರೆಯಷ್ಟು ಜಾಗ ಲಭ್ಯವಿದ್ದು ಅಲ್ಲಿ ಪೀಠ ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ಅಲ್ಲಿ ನಿರ್ಮಿಸಿದರೆ ಉಡುಪಿ ಹಾಗೂ ಮಂಗಳೂರು ಜಿಲ್ಲೆಯವರಿಗೆ ಅನುಕೂಲ. ಹಿಂದಿನ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದರು. ಇದೀಗ ಮತ್ತೊಮ್ಮೆ ನಿಯೋಗದೊಂದಿಗೆ ತೆರಳಿ ಸಿಎಂ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿಯಾಗೋಣ ಎಂದರು.

ನಿವೃತ್ತ ಪತ್ರಕರ್ತ ನಿತ್ಯಾನಂದ ಪಡ್ರೆ, ಖ್ಯಾತ ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ, ಹಿರಿಯ ವಕೀಲ ಮಟ್ಟಾರು ರತ್ನಾಕರ್​ ಹೆಗ್ಡೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್​ ರಾವ್​, ಚಿಂತಕ ಯಾಸಿನ್​ ಶಿರೂರು, ಬೈಂದೂರು ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ ಪೂಜಾರಿ, ಮಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಕೊರಗ, ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಹರೀಶ್​, ಉಡುಪಿ ವಕೀಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ್​ ಶೆಟ್ಟಿ ಉಪಸ್ಥಿತರಿದ್ದರು.
ಸುರೇಶ್​ ಕಾಮತ್​ ಕಟಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಾಮಾಜಿಕ ಕಾರ್ಯಕರ್ತ ವಿಜಯ್​ ಡಿಸೋಜ ವಂದಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಪ್ರತಿ ತಾಲೂಕಿನಲ್ಲೂ ಸಭೆ  

ಕರಾವಳಿ ಹೈಕೋರ್ಟ್​ ಪೀಠ ಹೋರಾಟ ಸಮಿತಿಯ ಸಂಚಾಲಕ ಪ್ರೇಮಪ್ರಸಾದ್​ ಶೆಟ್ಟಿ ಮಾತನಾಡಿ, ಹೈಕೋರ್ಟ್​ ಪೀಠದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಸಭೆ ಆಯೋಜಿಸಲಾಗಿದೆ. ಪ್ರತಿ ತಾಲೂಕಿನಲ್ಲಿಯೂ ಸಹ ವಕೀಲರ ಸಂಘದವರು ಮುಂದಿನ 15 ದಿನದೊಳಗೆ ಹಕ್ಕೊತ್ತಾಯ ಸಭೆ ನಡೆಸಬೇಕು. ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ನಿರಂತರವಾಗಿ ಪ್ರಸಾರಗೊಳ್ಳುವಂತಾಗಿ, ಅದು ಆಳುವ ಸರ್ಕಾರದ ಗಮನ ಸೆಳೆಯುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಇದು ಹಕ್ಕೊತ್ತಾಯ ಮಾತ್ರ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಹೋರಾಟವನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
"

ಕರಾವಳಿಯಲ್ಲಿ ಹೈಕೋರ್ಟ್​ ಪೀಠ ಸ್ಥಾಪನೆ ವಿಚಾರಕ್ಕೆ ಪರ-ವಿರೋಧ ಸಹಜ. ಇದಕ್ಕೆ ಜನಾಭಿಪ್ರಾಯ ಸಂಗ್ರಹ ಅತ್ಯಗತ್ಯ. ಮುಖ್ಯವಾಗಿ ಕರಾವಳಿ ಭಾಗದ ಜನಪ್ರತಿನಿಧಿಗಳು ಆಲೋಚಿಸಬೇಕು. ಅವರಲ್ಲಿ ಇಚ್ಛಾಶಕ್ತಿ ಇರಬೇಕು. ಕರಾವಳಿಯ ಮೂರೂ ಜಿಲ್ಲೆಯವರು ಒಗ್ಗಟ್ಟು ತೋರಬೇಕು.

— ಶ್ಯಾಮಲಾ ಭಂಡಾರಿ. ರಾಜ್ಯ ವಕೀಲರ ಪರಿಷತ್​ ಸದಸ್ಯೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net