ಉಡುಪಿಯ ಎಸ್ಡಿಎಂ ಕಾಲೇಜಿನಲ್ಲಿ 'ವಿಶ್ವ ಸ್ತನ್ಯಪಾನ ಸಪ್ತಾಹ'ದ ನಿಮಿತ್ತ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು. ಪ್ರೊ. ಡಾ. ಮಮತಾ ಕೆ.ವಿ., ಡಾ.ಪೃಥ್ವಿರಾಜ್ ಪುರಾಣಿಕ್, ಡಾ. ಸಹನಾ ಶಂಕರಿ, ಡಾ. ಚಿತ್ರಲೇಖಾ, ಡಾ. ಕಾವ್ಯಾ, ಡಾ. ಪ್ರಿಯಾಂಕಾ ವೈ. ಇದ್ದರು.
Published on:
Copied
Follow Us
*
ಪ್ರಾಂಶುಪಾಲೆ
ಡಾ. ಮಮತಾ ಕೆ.ವಿ. ಮಾಹಿತಿ
* ಎಸ್ಡಿಎಂ ಕಾಲೇಜಿನಲ್ಲಿ ಬೀದಿ ನಾಟಕ ಪ್ರದರ್ಶನ
ಉಡುಪಿ: ಸ್ತನ್ಯಪಾನ ಮಾಡಿಸುವುದರಿಂದ ಬೆಳೆಯುವ ಮಗುವಿಗೆ ಬೇಕಾಗುವ ಎಲ್ಲ ಪೋಫಕಾಂಶಗಳು ಲಭಿಸುವುದಲ್ಲದೆ, ಮೆದುಳಿನ ಬೆಳವಣಿಗೆಗೆ ಬೇಕಾಗುವ ಜೀವಸತ್ವಗಳೂ ದೊರೆಯುತ್ತವೆ. ಸ್ತನ್ಯಪಾನವು ತಾಯಂದಿರನ್ನು ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್ನಿಂದ ತಡೆಗಟ್ಟುವುದಲ್ಲದೆ, ತಾಯಿ ಹಾಗೂ ಮಗುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ ಎಂದು ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ತಿಳಿಸಿದರು.
ಉಡುಪಿ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 'ವಿಶ್ವ ಸ್ತನ್ಯಪಾನ ಸಪ್ತಾಹ'ದ ನಿಮಿತ್ತ ಪದವಿ ವಿದ್ಯಾರ್ಥಿಗಳು ಹಾಗೂ ಕುಮಾರಭೃತ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ಆಯೋಜಿಸಿದ್ದ ಸ್ತನ್ಯಪಾನ ಪ್ರಯೋಜನಗಳ ಜಾಗೃತಿ ಕುರಿತ ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ಜನರಿಗೆ ವಿವಿಧ ಮಾಹಿತಿ
ಮಗುವಿನ ಬೆಳವಣಿಗೆ, ವಿಕಾಸ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವಲ್ಲಿ ತಾಯಿಯ ಹಾಲಿನ ಮಹತ್ವ ವಿವರಿಸಿ, ಶಿಶು ಆಹಾರ ಪದ್ಧತಿಯನ್ನು ಸೂಕ್ತವಾಗಿ ಅನುಸರಿಸಲು ಪ್ರೋತ್ಸಾಹಿಸಲಾಯಿತು. ಮಗುವಿಗೆ ಮೊದಲ ಆರು ತಿಂಗಳವರೆಗೆ ತಾಯಿಯ ಹಾಲನ್ನು ಮಾತ್ರ ನೀಡುವಂತೆ ಹಾಗೂ ಸ್ತನ್ಯಪಾನ ಸಾಧ್ಯವಿದ್ದಾಗಲೂ ಅನಗತ್ಯವಾಗಿ ಫಾರ್ಮುಲಾ ಹಾಲು ಬಳಸಬಾರದು ಎಂಬ ಮಾಹಿತಿಯನ್ನು ನಾಟಕಗಳ ಮೂಲಕ ತಿಳಿಸಲಾಯಿತು.
ಹಾಲುಣಿಸುವ ಪ್ರಾತ್ಯಕ್ಷಿಕೆ
ಮಗುವಿಗೆ ಹಾಲುಣಿಸುವಾಗ ತಾಯಿಯ ದೇಹದ ಸ್ಥಿತಿ, ಮಗುವನ್ನು ಸರಿಯಾಗಿ ಹಿಡಿಯುವ ವಿಧಾನ ಮತ್ತು ಸರಿಯಾದ ರೀತಿಯಲ್ಲಿ ಹಾಲು ಹೀರುವ ವಿಧಾನ ಸೇರಿದಂತೆ ಸೂಕ್ತರಿತಿಯಲ್ಲಿ ಸ್ತನ್ಯಪಾನ ಮಾಡುವ ವಿಧಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಪರಿಣಾಮಕಾರಿ ಹಾಲುಣಿಸುವಿಕೆ ಮತ್ತು ತಾಯಿಯ ವಿಶ್ರಾಮದ ಸರಿಯಾದ ಕ್ರಮಗಳ ಮಹತ್ವವನ್ನೂ ವಿದ್ಯಾರ್ಥಿಗಳು ಅಭಿನಯದ ಮೂಲಕ ತೋರ್ಪಡಿಸಿದರು.
ಕುಮಾರಭೃತ್ಯ ವಿಭಾಗದ ಮುಖ್ಯಸ್ಥ ಡಾ.ಪೃಥ್ವಿರಾಜ್ ಪುರಾಣಿಕ್, ಕಾರ್ಯಕ್ರಮದ ಸಂಯೋಜಕಿ ಡಾ. ಸಹನಾ ಶಂಕರಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಚಿತ್ರಲೇಖಾ, ಡಾ. ಕಾವ್ಯಾ, ಡಾ. ಪ್ರಿಯಾಂಕಾ ವೈ. ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯರು, ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು, ತಾಯಂದಿರು, ಗರ್ಭಿಣಿಯರು, ಆಸ್ಪತ್ರೆಯ ಆರೋಗ್ಯಾಕಾಂಕ್ಷಿಗಳು, ನರ್ಸ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.