* ಉಡುಪಿ ಯಶ್ಪಾಲ್ ಸುವರ್ಣ ಆಕ್ರೋಶ
* ಶಾಶ್ವತ ನಿವಾಸಿ ಪ್ರಮಾಣಪತ್ರ ನಿರ್ಧಾರ ಕೈಬಿಡಿ
* ದೇಶದ ಆಂತರಿಕ ಭದ್ರತೆಗೆ ದಕ್ಕೆ, ಅಪಾಯ
ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಾನೂನು ನಿಯಮಾವಳಿ ಮೀರುತ್ತಿದೆ. ಬಾಂಗ್ಲಾ ಅಕ್ರಮ ವಲಸಿಗರನ್ನು ರಕ್ಷಿಸಿ ಅವರನ್ನು ಮತದಾರ ಪಟ್ಟಿಯಲ್ಲಿ ಮುಂದುವರಿಸಲು ಸಂವಿಧಾನ ಬಾಹಿರವಾಗಿ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ನೀಡಲು ಆದೇಶಿಸಿದೆ. ಇದು ದೇಶದ ಆಂತರಿಕ ಭದ್ರತೆಗೆ ಅಪಾಯ ಉಂಟಾಗಲಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ಸಂದರ್ಭದಲ್ಲಿಯೇ ನುಸುಳುಕೋರರಿಗೆ ಪ್ರಮಾಣಪತ್ರ ಒದಗಿಸಿ ಮತದಾನದ ಹಕ್ಕು ನೀಡುವ ಷಡ್ಯಂತ್ರ ನಡೆಸಿ, ರಾಜಕೀಯ ಲಾಭ ಪಡೆದುಕೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ತನ್ಮೂಲಕ ದೇಶ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಿ ಕರ್ನಾಟಕವನ್ನೂ ಭಯೋತ್ಪಾದಕರ ಸ್ವರ್ಗ ಮಾಡಲು ಹೊರಟಿದ್ದಾರೆ ಎಂದು ಯಶ್ಪಾಲ್ ಆರೋಪಿಸಿದ್ದಾರೆ.
ಎಸ್ಐಆರ್ನಿಂದ ಕಾಂಗ್ರೆಸ್ಗೆ ಭಯ
ಮತದಾರ ಪಟ್ಟಿಯಿಂದ ಅನರ್ಹ ಮತದಾರರನ್ನು ಕೈಬಿಟ್ಟು ಪಾರದರ್ಶಕವಾಗಿ ಚುನಾವಣೆ ನಡೆಸಲು ಆಯೋಗ ಎಸ್ಐಆರ್ ಪ್ರಕ್ರಿಯೆ ಆರಂಭಿಸಿದೆ. ಅದರಿಂದ ಭಯಭೀತವಾಗಿರುವ ಕಾಂಗ್ರೆಸ್, ಇದೀಗ ಅನರ್ಹರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಗೆ ಮುಂದಾಗಿದೆ. ರಾಜ್ಯ ಸರ್ಕಾರವೇ ದೇಶ ವಿರೋಧಿ ಶಕ್ತಿಗಳಿಗೆ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದೆ.
ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯ ಎಚ್ಚರಿಕೆ
ಪಶ್ಚಿಮ ಬಂಗಾಳ ಸಹಿತ ವಿವಿಧ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಮಂದಿ ಅನರ್ಹ ಮತದಾರರನ್ನು ಕೈಬಿಡಲಾಗಿದೆ. ಈ ಬೆಳವಣಿಗೆಯ ಬಳಿಕ ಮತಾಂಧ, ದೇಶ ವಿರೋಧಿ ಶಕ್ತಿಗಳನ್ನು ಓಲೈಕೆ ಮಾಡಲು ಪಿಆರ್ಸಿ ಆದೇಶ ಹೊರಡಿಸಲಾಗಿದೆ. ಈ ನಿರ್ಧಾರವನ್ನು ಸಿಎಂ ಡಿಕೆಶಿ ಕೂಡಲೇ ಕೈಬಿಡಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯ ಮೂಲಕ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.