ಉಡುಪಿಯಲ್ಲಿ ಆಯೋಜಿಸಿದ್ದ 'ನುಡಿತೋರಣ' ಸಮಾವೇಶದಲ್ಲಿ ಮೂವರು ಮಹಿಳಾ ಸಾಧಕರಿಗೆ 'ನುಡಿಭೂಷಣ ಪ್ರಶಸ್ತಿ' ನೀಡಲಾಯಿತು. ಡಾ.ಪ್ರೇಮಶೇಖರ್, ಎಎಸ್ಎನ್ ಹೆಬ್ಬಾರ್, ನೀಲಾವರ ಸುರೇಂದ್ರ ಅಡಿಗ, ನುಡಿತೋರಣದ ವೆಂಕಟೇಶ ಶೇಷಾದ್ರಿ, ರಾ.ಸು. ವೆಂಕಟೇಶ್, ಶ್ರೀಕಾಂತ ಪತ್ರೆಮರ, ಜಿ.ಎಸ್. ಸರೋಜಾ ಇತರರಿದ್ದರು.
Published on:
Copied
Follow Us
* ಹಿರಿಯ ಸಾಹಿತಿ ಡಾ. ಪ್ರೇಮಶೇಖರ್ ಅಭಿಪ್ರಾಯ
* 'ನುಡಿತೋರಣ' ಸಾಹಿತ್ಯ-ಸಾಂಸ್ಕೃತಿಕ ಬಳಗದ ಸಮಾವೇಶ
ಉಡುಪಿ: ಸಾಹಿತ್ಯದ ಪಯಣದ ಹಾದಿ ಹೂವಿನ ಹಾಸಿಗೆಯಲ್ಲ. ಅಲ್ಲಿ ಎಚ್ಚರಿಕೆಯಿಂದ ನಡೆಯಬೇಕು. ನವೋದಯ ಸಾಹಿತ್ಯವು ಬದುಕಿನ ಒಳ್ಳೆಯ ಮುಖ ತೋರಿದರೆ ಪ್ರಗತಿಶೀಲ ಸಾಹಿತ್ಯವು ಬದುಕಿನ ಅಭಿವೃದ್ಧಿಯ ಆಶಯ ಹೊಂದಿತ್ತು. ನವ್ಯಕಾವ್ಯದಲ್ಲಿ ಎಡ ಸಾಹಿತ್ಯ ಬಂದಿದ್ದು, ಬಂಡಾಯ ಸಾಹಿತ್ಯವು ಪ್ರಗತಿಶೀಲರ ಮುಂದುವರಿದ ಭಾಗವಾಯಿತು. ಸ್ಪರ್ಧೆ ಮತ್ತು ಅಜೆಂಡಾಗಳ ಇಂದಿನ ದಿನಗಳಲ್ಲಿ ಸ್ಪರ್ಧೆಗಾಗಿ ಮಾತ್ರ ಕಥೆ ಬರೆಯುವ ಗೀಳು ಹೆಚ್ಚಾಗಿದೆ ಎಂದು ಹಿರಿಯ ಸಾಹಿತಿ, ಅಂತಾರಾಷ್ಟ್ರೀಯ ವಿದ್ಯಮಾನಗಳ ತಜ್ಞ ಡಾ. ಪ್ರೇಮಶೇಖರ್ ಅಭಿಪ್ರಾಯಪಟ್ಟರು.
ಉಡುಪಿ ಪೇಜಾವರ ಮಠದ ಶ್ರೀರಾಮವಿಠ್ಠಲ ಸಭಾಭವನದಲ್ಲಿ 'ನುಡಿತೋರಣ' ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ಶನಿವಾರ (ಮೇ 23) ಆಯೋಜಿಸಿದ್ದ 4ನೇ ವಾರ್ಷಿಕ ರಾಜ್ಯ ಮಟ್ಟದ ಸಮಾವೇಶ, ಆರು ಪುಸ್ತಕಗಳ ಬಿಡುಗಡೆ ಹಾಗೂ "ನುಡಿ ಭೂಷಣ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳೊಂದಿಗೆ ಕನ್ನಡದಲ್ಲಿ ಮಾತಾಡಿ
ಹಿರಿಯ ವಕೀಲ ಹಾಗೂ ಖ್ಯಾತ ಹಾಸ್ಯ ಸಾಹಿತಿ ಎಎಸ್ಎನ್ ಹೆಬ್ಬಾರ್ ಮಾತನಾಡಿ, ಎಲ್ಲಿ ಸಾಧ್ಯವೋ ಅಲ್ಲಿ ಇಂಗ್ಲಿಷ್ ಪ್ರಾಬಲ್ಯ ಕಡಿಮೆ ಮಾಡಲು ಯತ್ನಿಸಬೇಕು. ಪ್ರಯತ್ನಪೂರ್ವಕವಾಗಿ ಕನ್ನಡದಲ್ಲೇ ಮಾತನಾಡಬೇಕು. ಸಾಧ್ಯವಾದರೆ ಬರೆಯಬೇಕು. ಮಾತೃಭಾಷೆಯ ಉಳಿವಿಗಾಗಿ ಶ್ರಮ ಪಡಲೇಬೇಕು. ಜನಮನದಲ್ಲಿ ಉಳಿಯುವ ಸಾಹಿತ್ಯ ಹೊರಬರಬೇಕು. ಮುಖ್ಯವಾಗಿ ತಂದೆ-ತಾಯಿ ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಿದರೆ ಕನ್ನಡ ಉಳಿಯುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನುಡಿತೋರಣದ ವೆಂಕಟೇಶ ಶೇಷಾದ್ರಿ, ರಾ.ಸು. ವೆಂಕಟೇಶ್ ಉಪಸ್ಥಿತರಿದ್ದರು.
ಆಶ್ವಿಜಾ ಶ್ರೀಧರ್ ಮತ್ತು ತಂಡದವರಿಂದ ನಾಡಗೀತೆ, ಪರಿಮಳಾ ಮಹೇಶ್ ರಾವ್ ಅವರಿಂದ ಪ್ರಾರ್ಥನಾ ನೃತ್ಯ ನಡೆಯಿತು. ನುಡಿತೋರಣ ಬಳಗದ ಜಿ.ಎಸ್. ಸರೋಜಾ ಸ್ವಾಗತಿಸಿದರು. ರಾಧಿಕಾ ಕಾಮತ್ ಉಡುಪಿ ವಂದಿಸಿದರು. ಸಂಚಾಲಕ ಶ್ರೀಕಾಂತ ಪತ್ರೆಮರ ಪ್ರಾಸ್ತಾವಿಕವಾಗಿ ಮಾತನಾಡಿದರು. ಛಾಯಾ ಭಗವತಿ ಬೆಂಗಳೂರು ಮತ್ತು ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ
ಬೆಂಗಳೂರಿನ ರಾಧಾ ಟೇಕಲ್, ಉಡುಪಿಯ ಶೋಭಾ ಹರಿಪ್ರಸಾದ್ ಮತ್ತು ಚಿತ್ರದುರ್ಗದ ಶೈಲಾ ಜಯಕುಮಾರ್ ಅವರಿಗೆ 'ನುಡಿಭೂಷಣ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಚೇಂಪಿ ದಿನೇಶ್, ಸುಮನಾ ಹೇರ್ಳೆ ಮತ್ತು ಕ್ಷಮಾ ರಘುರಾಮ್ ಪರಿಚಯಿಸಿದರು. ಶ್ರೀಕಾಂತ ಪತ್ರೆಮರ ಅವರ ಚೊಚ್ಚಲ ಕವನ ಸಂಕಲನ 'ವ್ಯಕ್ತ ಪತ್ರೆಗಳು' ಮಧು ವಸ್ತ್ರದ ಅವರ 'ಚೈತ್ರದ ಚಿಗುರು', ವಿಜಯ ನಿರ್ಮಲ ಅವರ 'ಕನ್ನಡದ ಆಧುನಿಕ ಸಾಧಕಿಯರು' ಜಯಶ್ರೀ ರಾಜು ಸಂಪಾದಿತ ಕೃತಿ 'ನುಡಿಕಥಾಮಾಲಾ', ಕಿರಣ್ ಹಿರಿಸಾವೆ ಅವರ 'ಆ ಐದು ನಿಮಿಷಗಳು' ಮತ್ತು ಅನುವಾದಿತ ಕೃತಿ 'ವೋ ಪಾಂಚ್ ಮಿನಟ್' ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಕವಿಗೋಷ್ಠಿ, ರಂಗಪ್ರದರ್ಶನ
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ನಾಡಿನ 24 ಕವಿಗಳು ಕವಿತೆ ವಾಚಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಲಾ ಪ್ರದರ್ಶನ ಹಾಗೂ ಖ್ಯಾತ ಕಲಾವಿದೆ ಡಾ. ಮೀರಾ ಎಚ್.ಎನ್. ಅವರಿಂದ 'ಪಂಚವರ್ಣೆ' ಏಕವ್ಯಕ್ತಿ ರಂಗಪ್ರದರ್ಶನ ನಡೆಯಿತು.
"
ಸಾಹಿತ್ಯ ಸ್ಪರ್ಧೆ ಮತ್ತು ಅಜೆಂಡಾಗಳ ಕಾಲವಿದು. ಕಥೆಗಾರರ ಉದ್ದೇಶ ಪ್ರಶಸ್ತಿ ಗಳಿಸುವುದಕ್ಕಿಂತ ಆನಂದವೇ ಮೂಲ ಧ್ಯೇಯವಾಗಿರಬೇಕು. ಪ್ರಶಸ್ತಿ ಆಸೆಯಿಂದ ಬರೆದರೆ ಉತ್ತಮ ಕಥೆಗಾರರಾಗಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಕಿರಿದಾದ ಕೊಳ್ಳವಾಗಿದ್ದು ಇಲ್ಲಿ ಶಾರ್ಕ್, ಹಾವುಗಳೂ ಇವೆ. ಲೇಖಕಿಯರು ಜೋಪಾನವಾಗಿರಬೇಕು. ಅಮಾಯಕ ಹೆಣ್ಣುಮಕ್ಕಳು ಪ್ರಸಿದ್ಧಿ ನೆಪದಿಂದ ಮೋಸಗಾರರ ಜಾಲಕ್ಕೆ ಬೀಳುವ ಭಯವಿದೆ.