ಅಪಘಾತ ತಾಣವಾದ ರಾಜ್ಯ ಹೆದ್ದಾರಿ!

ಕಾರ್ಕಳ& ಪಡುಬಿದ್ರಿ ರಾಜ್ಯ ಹೆದ್ದಾರಿ.
ಕಾರ್ಕಳ& ಪಡುಬಿದ್ರಿ ರಾಜ್ಯ ಹೆದ್ದಾರಿ.
Published on

ಪ್ರಮುಖ ಮುಖ್ಯಾಂಶಗಳು

  • ಬೆಳ್ಮಣ್​, ನಂದಿಕೂರು, ಮುದರಂಗಡಿ ತಿರುವು ಬ್ಲಾಕ್​ ಸ್ಪಾಟ್​
  • ಮಿತಿ ಮೀರಿದ ವಾಹನಗಳ ವೇಗ
  • ಅವೈಜ್ಞಾನಿಕ ತಿರುವು

ಹರಿಪ್ರಸಾದ್​ ನಂದಳಿಕೆ ಕಾರ್ಕಳ

ಕರಾವಳಿ ಮತ್ತು ಟ್ಟದ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಕಾರ್ಕಳ& ಪಡುಬಿದ್ರಿ ರಾಜ್ಯ ಹೆದ್ದಾರಿ ಇತ್ತೀಚಿನ ದಿನಗಳಲ್ಲಿ ರಕ್ತಸಿಕ್ತವಾಗುತ್ತಿದೆ. ರಸ್ತೆ ವಿಸ್ತರಣೆ ಮತ್ತು ಸುಧಾರಣೆಯಾದರೂ ಈ ನಡುವೆ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಳೆದ ಎಂಟು ತಿಂಗಳಲ್ಲಿ ಈ ಮಾರ್ಗದಲ್ಲಿ ಸಣ್ಣ ಮತ್ತು ದೊಡ್ಡ ಪ್ರಮಾಣದ 40ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಅಮಾಯಕ ಜೀವಗಳು ಬಲಿಯಾಗಿದ್ದರೆ, ಹಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ವಿಶೇಷವಾಗಿ ಬೆಳ್ಮಣ್​, ನಂದಿಕೂರು ಮತ್ತು ಮುದರಂಗಡಿ, ನಿಟ್ಟೆ, ಮಾವಿನಕಟ್ಟೆ, ಆಸುಪಾಸಿನ ತಿರುವುಗಳು "ಬ್ಲಾಕ್​ ಸ್ಪಾಟ್​'ಗಳಾಗಿ ಮಾರ್ಪಟ್ಟಿವೆ.

ಅವೈಜ್ಞಾನಿಕ ತಿರುವು

ಕಾರ್ಕಳ& ಪಡುಬಿದ್ರಿ ರಾಜ್ಯ ಹೆದ್ದಾರಿ ನಿಟ್ಟೆ ಪರಪ್ಪಾಡಿಯಿಂದ ಬಪ್ಪಗೋಳಿ ಕ್ರಾಸ್​ವರೆಗಿನ ರಸ್ತೆ ಸಾಲು ಸಾಲು ಅಪಘಾತಗಳಿಗೆ ಸಾಯಾಗುತ್ತಿದ್ದು, ನಿರಂತರವಾಗಿ ನಂದಳಿಕೆ, ಬೆಳ್ಮಣ್​ ಪೇಟೆ ಪರಿಸರ, ನೀಚಾಲು, ಸಾಂತೂರು, ಮುದರಂಗಡಿ ಕ್ರಾಸ್​, ಕಾಂಜರಕಟ್ಟೆ, ನಿಟ್ಟೆ ಪರಿಸರದಲ್ಲಿ ಒಂದಲ್ಲ ಒಂದು ಸಣ್ಣ ಪುಟ್ಟ ಅಪಘಾತಗಳು ನಿತ್ಯ ನಿರಂತರ ನಡೆಯುತ್ತಲೆ ಇದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ 10ಕ್ಕೂ ಅಧಿಕ ಸಣ್ಣ ಹಾಗೂ ಗಂಭೀರ ಸ್ವರೂಪದ ಅಪಘಾತಗಳು ಸಂಭವಿಸಿವೆ. ಈ ಹಿಂದೆಯೂ ಇಲ್ಲಿ ಅಪಘಾತ ಆಗಾಗ ನಡೆಯುತ್ತಿತ್ತು. ರಸ್ತೆ ಉತ್ತಮವಾಗಿದ್ದರೂ ಅತಿ ವೇಗದ ಚಾಲನೆ ಹಾಗೂ ಅವೈಜ್ಞಾನಿಕ ಕ್ರಾಸ್​ಗಳು ಅಪಘಾತದ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಹಲವು ಸಾವು
ನಿಟ್ಟೆಯಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ತಂದೆ ಮಗಳನ್ನು ಬಲಿ ಪಡೆದ ಕಾರು.
ಇತ್ತೀಚೆಗೆ ನಡೆದ ಭೀಕರ ಅಪಘಾತವೊಂದು ಇಡೀ ಪರಿಸರವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಏ.24ರಂದು ಸಿಇಟಿ ಪರೀೆ ಮುಗಿಸಿ ತಂದೆ ನವೀನ್​ಚಂದ್ರ ಮೂಲ್ಯ ಅವರೊಂದಿಗೆ ಬೈಕ್​ನಲ್ಲಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಪ್ರೇರಣಾ ಅವರಿಗೆ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಆಸ್ಪತ್ರೆಯಲ್ಲಿ ಸಾವು&ಬದುಕಿನ ನಡುವೆ ಹೋರಾಡುತ್ತಿದ್ದ ಮಗಳು ಪ್ರೇರಣಾ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಸಾರ್ವಜನಿಕರ ಮಾಹಿತಿ ಪ್ರಕಾರ ವಿದ್ಯಾರ್ಥಿಗಳ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಪಾದಚಾರಿ ಸಾವು
ಬೆಳ್ಮಣ್​ ಪೆರಲ್​ಪಾದೆ ಬಳಿಯಲ್ಲಿ ಇತ್ತೀಚೆಗಷ್ಟೇ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಪಾದಚಾರಿಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನ ಮರಕ್ಕೆ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಕೆಲವೇ ದಿನಗಳ ಅಂತರದಲ್ಲಿ ರಾತ್ರಿ ವೇಳೆ ಗೂಡ್ಸ್​ ವಾಹನವೊಂದು ಪಲ್ಟಿಯಾಗಿ ಸಮೀಪದಲ್ಲಿರುವ ಅರಣ್ಯಾಧಿಕಾರಿಗಳ ಕ್ವಾಟ್ರರ್ಸ್​ ಬಳಿಗೆ ಉರುಳಿ ಬಿದ್ದಿತ್ತು. ವಾಹನ ಸವಾರ ಗಾಯಗೊಂಡಿದ್ದು, ಭಾರಿ ಆತಂಕ ಸೃಷ್ಟಿಸಿತ್ತು. ಕೆಲ ದಿನಗಳ ಹಿಂದೆ ಕಾಂಜರಕಟ್ಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಲೋಕೋಪಯೋಗಿ ಇಲಾಖೆಗೆ ಸೂಚನೆ

ಸುಪ್ರೀಂ ಕೋರ್ಟ್​ ಮಾರ್ಗಸೂಚಿಯಂತೆ ಪ್ರತಿ ಅಪಘಾತದ ನಂತರ ಪೊಲೀಸ್​ ಇಲಾಖೆ ಆರ್​ಟಿಒ, ಲೋಕೋಪಯೋಗಿ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗುತ್ತದೆ. ಪೊಲೀಸ್​ ಇಲಾಖೆ ವರದಿ ಆಧಾರದ ಮೇಲೆ ರಸ್ತೆಯ ತಾಂತ್ರಿಕ ಲೋಪದೋಷಗಳ ಬಗ್ಗೆ ಮರುಪರಿಶೀಲನೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಅಪಘಾತದ ತುರ್ತು ಚಿಕಿತ್ಸೆ ಮತ್ತು ವರದಿ ಪ್ರಕ್ರಿಯೆಯಲ್ಲಿ ಆಸ್ಪತ್ರೆಗಳನ್ನೂ ಈ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗುತ್ತಿದೆ.
ವೇಗಕ್ಕೆ ಬೇಕು ಬ್ರೇಕ್​!
ಪ್ರತಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ವೇಳೆ ಮಿತಿ ಮೀರಿದ ಪ್ರಯಾಣಿಕರನ್ನು ತುಂಬಿ ಸಾಗುವ ವೇಗಧೂತ ಬಸ್​ಗಳು ಹಾಗೂ ಟಿಪ್ಪರ್​ ಲಾರಿಗಳ ವೇಗಕ್ಕೆ ಬ್ರೇಕ್​ ಹಾಕಬೇಕಾಗಿದೆ. ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಬೈಕ್​ ಹಾಗೂ ಕಾರುಗಳು ಮಿತಿ ಮೀರಿದ ವೇಗದಲ್ಲಿ ಸಂಚಾರ ನಡೆಸುತ್ತಿದ್ದು, ಇದಕ್ಕೆ ಕಡಿವಾಣ ಅಗತ್ಯ. ಈ ಭಾಗದ ರಸ್ತೆಯಲ್ಲಿ ನಡೆದ ಹಲವಾರು ಅಪಘಾತಗಳಲ್ಲಿ ಕಾಲೇಜು ವಿದ್ಯಾರ್ಥಿಗಳ ವಾಹನಗಳೇ ಹೆಚ್ಚಾಗಿ ಅಪಘಾತಕ್ಕೀಡಾಗಿವೆ.

ಈ ಭಾಗದಲ್ಲಿ ಅಪಘಾತಗಳನ್ನು ತಡೆಗಟ್ಟಲು ಪೊಲೀಸ್​ ಇಲಾಖೆ ಈಗ ಮುಂದಾಗಿದ್ದು, ರಸ್ತೆಯಲ್ಲಿ ಸಂಚರಿಸುವ ಅತಿ ವೇಗದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅತಿಯಾದ ವೇಗಕ್ಕೆ ಬ್ರೇಕ್​ ಹಾಕಲು 20 ಕಡೆಗಳಲ್ಲಿ ರಬ್ಬರ್​ ಪಟ್ಟಿಗಳನ್ನು(ಸ್ಪೀಡ್​ ಬ್ರೇಕರ್​ ಮಾದರಿ) ಪ್ರಾಯೋಜಕರ ನೆರವಿನೊಂದಿಗೆ ವಿವಿಧ ಕಡೆಗಳಲ್ಲಿ ಅಳವಡಿಸಲಾಗುತ್ತದೆ.

— ಪ್ರಸನ್ನ ಎಂ.ಎಸ್​., ಗ್ರಾಮಾಂತರ ಪೊಲೀಸ್​ ಠಾಣೆ ಉಪನಿರೀಕ್ಷಕ

ಇಲ್ಲಿ ಹಲವು ಅಪಘಾತ ಸಂಭವಿಸಿದ್ದು, ಗಾಯಗೊಂಡವರು, ಮೃತರನ್ನು ನಾನೇ ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಕೊಂಡೊಯ್ದಿದ್ದೇನೆ. ರಸ್ತೆ ಉತ್ತಮ ಸ್ಥಿತಿಯಲ್ಲಿದ್ದರೂ ಕೆಲವರ ವೇಗದ ಚಾಲನೆ ಇನ್ನೊಬ್ಬರ ಜೀವಕ್ಕೆ ಮುಳುವಾಗುತ್ತಿದೆ. ಅಪಘಾತ ಪ್ರಮಾಣ ಕಡಿಮೆಯಾಗಲು ಇಲಾಖೆ ಸೂಕ್ತ ಕ್ರಮ ವಹಿಸಬೇಕು.

— ಸುಪ್ರೀತ್​ ಶೆಟ್ಟಿ ಕೆದಿಂಜೆ, ಸಮಾಜ ಸೇವಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net