ಭಯವಿಲ್ಲದೆ ಮಕ್ಕಳು ಬರೆಯಲಿ ಪರೀಕ್ಷೆ

ಉಡುಪಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ  ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ, ಪುಷ್ಪಲತಾ, ರಶ್ಮಿ, ಲೋಕೇಶ್​ ಸಿ., ಡಾ. ಬಸವರಾಜ್​ ಹುಬ್ಬಳ್ಳಿ, ಡಾ. ಅಶೋಕ್​ ಕಾಮತ್​ ಇತರರಿದ್ದರು.
ಉಡುಪಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ, ಪುಷ್ಪಲತಾ, ರಶ್ಮಿ, ಲೋಕೇಶ್​ ಸಿ., ಡಾ. ಬಸವರಾಜ್​ ಹುಬ್ಬಳ್ಳಿ, ಡಾ. ಅಶೋಕ್​ ಕಾಮತ್​ ಇತರರಿದ್ದರು.
Published on

* ಸೂಕ್ತ ವಾತಾವರಣ ಕಲ್ಪಿಸಲು ಡಿಸಿ ಸ್ವರೂಪಾ ಸೂಚನೆ 

* ಅಧಿಆಖರಿಗಳೊಂದಿಗೆ ಎಸ್​ಎಸ್​ಎಲ್​ಸಿ ಎಕ್ಸಾಂ ಸಿದ್ಧತಾ ಸಭೆ

ಉಡುಪಿ: ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯು ಮಾ.18ರಿಂದ ಏ.2ರ ವರೆಗೆ ಜಿಲ್ಲೆಯ 51 ಕೇಂದ್ರಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ಗೊಂದಲ, ಭಯಕ್ಕೊಳಗಾಗದೆ ಸುಗಮವಾಗಿ ಪರೀಕ್ಷೆ ಬರೆಯಲು ಪೂರಕ ವಾತಾವರಣ ಕಲ್ಪಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಮಾ.12) ಆಯೋಜಿಸಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖವಾಗಿರುವ ಈ ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಆಗಬಾರದು. ಪರೀಕ್ಷಾ ಪಾವಿತ್ರ್ಯತೆ ಕಾಪಾಡುವುದರೊಂದಿಗೆ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾಡಳಿತದಿಂದಲೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ 14,151 ವಿದ್ಯಾರ್ಥಿಗಳು

ಜಿಲ್ಲೆಯು ಪ್ರತಿಶತ ನೂರು ಫಲಿತಾಂಶ ದಾಖಲಿಸಲು ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಹೊಸದಾಗಿ 13,516 ವಿದ್ಯಾರ್ಥಿಗಳು, 295 ರೆಗ್ಯೂಲರ್​ ಪುನರಾವರ್ತಿತ ಅಭ್ಯರ್ಥಿಗಳು, 293 ಖಾಸಗಿ ಹಾಗೂ 47 ಖಾಸಗಿ ಪುನರಾವರ್ತಿತ ಅಭ್ಯರ್ಥಿ ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ 7,353 ಗಂಡು, 6,798 ಹೆಣ್ಣು ಸೇರಿದಂತೆ ಒಟ್ಟು 14,151 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಉಡುಪಿ ವಲಯದಲ್ಲಿ 15, ಬ್ರಹ್ಮಾವರದಲ್ಲಿ 11, ಕಾರ್ಕಳದಲ್ಲಿ 9, ಬೈಂದೂರು ಮತ್ತು ಕುಂದಾಪುರದಲ್ಲಿ ತಲಾ 8 ಸೇರಿ ಒಟ್ಟು 51 ಪರೀಕ್ಷಾ ಕೇಂದ್ರ ಇರಲಿದೆ ಎಂದರು.

ಸಿಸಿ ಕೆಮರಾ ಅಳವಡಿಸಿ

51 ಪರೀಕ್ಷಾ ಕೇಂದ್ರಗಳಲ್ಲಿ 686 ಕೊಠಡಿ ನಿಗದಿಪಡಿಸಲಾಗಿದೆ. ಅಧೀಕ್ಷಕರು, ಮೇಲ್ವಿಚಾರಕರು, ಸ್ಥಾನಿಕ ಜಾಗೃತಿ ದಳದ ಅಧಿಕಾರಿಗಳು, ಮೊಬೈಲ್​ ಸ್ವಾಧೀನ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ವಿಚಕ್ಷಣಾ ದಳ, ಪರೀಕ್ಷಾ ನೋಡೆಲ್​ ಅಧಿಕಾರಿ ಸೇರಿದಂತೆ ಈಗಾಗಲೇ 1,350 ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್​, ಸ್ಮಾರ್ಟ್​ ವಾಚ್​ ತರುವಂತಿಲ್ಲ. ಅವರಿಗೆ ಅನುಕೂಲವಾಗುವಂತೆ ಗಡಿಯಾರ ಅಳವಡಿಸಬೇಕು. ಕೇಂದ್ರಗಳ ಒಳಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು. ಯಾವುದೇ ಅಕ್ರಮ ನಡೆಯದಂತೆ ತಡೆಯಲು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಕ್ಯಾಂಪಸ್​ಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದರು.
ಮಂಗಳೂರು ಸಿಟಿಇ ಪ್ರಾಂಶುಪಾಲೆ ಹಾಗೂ ಸಹ ನಿರ್ದೇಶಕಿ ಪುಷ್ಪಲತಾ ಮಾತನಾಡಿ, ವಿವಿಧ ಸಲಹೆ ನೀಡಿದರು. ಸಭೆಯಲ್ಲಿ ಸಹಾಯಕ ಕಮಿಷನರ್​ ರಶ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್​ ಸಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ್​ ಹುಬ್ಬಳ್ಳಿ, ಡಯಟ್​ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಉಪಸ್ಥಿತರಿದ್ದರು.

ಬಸ್​, ವಿದ್ಯುತ್​ ಕೊರತೆ ಆಗದಿರಲಿ 

ಗ್ರಾಮೀಣ ಪ್ರದೇಶದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಕೇಂದ್ರಕ್ಕೆ ಆಗಮಿಸಲು ಬಸ್​ಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಾಕಷ್ಟು ಬಸ್​ಗಳು ಪರೀಕ್ಷಾ ಸಂದರ್ಭದಲ್ಲಿ ಕಾರ್ಯಾಚರಿಸಬೇಕು. ಪರೀಕ್ಷಾ ಕೇಂದ್ರದ ಬಳಿಯೇ ಬಸ್​ ನಿಲುಗಡೆ ಮಾಡಿಸಬೇಕು ಎಂದು ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷಾ ಅವಧಿಯಲ್ಲಿ ನಿರಂತರ ವಿದ್ಯುತ್​ ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಪರೀಕ್ಷೆ ಆರಂಭದಿಂದ ಏಪ್ರಿಲ್​ ಅಂತ್ಯದವರೆಗೆ ವಿದ್ಯುತ್​ ಕಡಿತ ಮಾಡಬಾರದು ಎಂದು ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಿಸಿಲಿನ ತಾಪದಿಂದ ಮಕ್ಕಳು ಆಘಾತಕ್ಕೊಳಗಾಗುವ ಸಾಧ್ಯತೆ ಇದ್ದು, ಓಆರ್​ಎಸ್​ ದ್ರಾವಣ ಸಂಗ್ರಹಿಸಿಡಬೇಕು. ಕೇಂದ್ರಗಳಲ್ಲಿ ತುರ್ತು ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿ ನಿಯೋಜಿಸಬೇಕು ಎಂದು ಆರೋಗ್ಯಾಧಿಕಾರಿಗೆ ಡಿಸಿ ಸ್ವರೂಪಾ ಸೂಚಿಸಿದರು.
"

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕೆಲವು ನಿಯಮ ಸಡಿಲಗೊಳಿಸಿದ್ದು, ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಜತೆಗೆ ಉನ್ನತ ಶ್ರೇಣಿ ಪಡೆಯಲು ಪ್ರಯತ್ನಿಸುವಂತೆ ಪಾಲಕರು-ಶಿಕ್ಷಕರು ಪ್ರೋತ್ಸಾಹಿಸಿ, ಮನವೊಲಿಸಬೇಕು. ಕರ್ತವ್ಯದಲ್ಲಿರುವ ಅಧಿಕಾರಿಗಳೂ ಸಹ ನಮ್ಮದೇ ಮಕ್ಕಳು ಎಂದು ಭಾವಿಸಿ ಅವರ ಕಾಳಜಿ ವಹಿಸಿಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net