ಉಡುಪಿ: ಹಿಂದಿನ ಕಾಲದಲ್ಲಿ ಅನೇಕ ಮಂದಿ ಸ್ವಂತ ಆಸಕ್ತಿಯಿಂದ ಇತಿಹಾಸ, ಸಂಸ್ಕೃತಿ, ಜಾನಪದ, ಯಕ್ಷಗಾನ ವಿಷಯಗಳನ್ನು ದಾಖಲಿಸಿದ ಬರಿಗಾಲ ಸಂಶೋಧಕರು ಶತಮಾನದವರೆಗೆ ಸಂಶೋಧಕರಿಗೆ ಪೂರ್ವಭಾವಿ ಮಾಹಿತಿ ಒದಗಿಸಿ ದಾರಿತೋರಿಸಿದ್ದಾರೆ ಎಂದು ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ತಿಳಿಸಿದ್ದಾರೆ.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಅಂಗಸಂಸ್ಥೆ ಮಣಿಪಾಲ ಯುನಿವರ್ಸಲ್ ಪ್ರೆಸ್‌ನ 315ನೇ ಕೃತಿ, ಪು. ಶ್ರೀನಿವಾಸ ಭಟ್ ಕಟೀಲು ಅವರ ಲೇಖನಗಳ ಸಂಚಯ ‘ಪು ಶ್ರೀ ಸಂಸ್ಕೃತಿ ಸಂಪದ’ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ದೇಶಿಯ ಸಂಶೋಧಕರಿಗೆ ಶ್ರೀನಿವಾಸ್ ಭಟ್ ಮಾದರಿ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸ್ವಂತ ಆಸಕ್ತಿಯಿಂದ ಕ್ಷೇತ್ರ ಕಾರ್ಯ ನಡೆಸಿದ್ದರು. ಇಂದು ದೊಡ್ಡ ಸಂಸ್ಥೆಗಳಲ್ಲಿ ಸಂಶೋಧಕರಿಗೆ ವಿವಿಧ ಸವಲತ್ತು, ಹಣಕಾಸಿನ ನೆರವು ನೀಡಲಾಗುತ್ತಿದೆ. ಆದರೆ ಹಿಂದೆ ಯಾವ ಸೌಲಭ್ಯಗಳನ್ನು ಪಡೆಯದೆ ಜ್ಞಾನದ ಹಂಬಲದಿಂದ ಕರ್ತವ್ಯ ನಿರ್ವಹಿಸಿದವರು ಸ್ಮರಣೀಯರು ಎಂದರು.
ಕಟೀಲು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಹಾಗೂ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಅತಿಥಿಗಳಾಗಿದ್ದರು. ಪುಸ್ತಕದ ಸಂಪಾದಕರಾದ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಎಂ. ಮತ್ತು ಪು. ಗುರುಪ್ರಸಾದ್ ಭಟ್ ಉಪಸ್ಥಿತರಿದ್ದರು.