ಸರ್ಕಾರದಿಂದಲೇ ಶ್ರೀಮಧ್ವ ಜಯಂತಿ ಘೋಷಣೆ

ಅಮೆರಿಕದ ಡಲ್ಲಾಸ್​ ನಗರದಿಂದ ಸಂದೇಶ ರವಾನಿಸಿದ ಸುಗುಣೇಂದ್ರ ತೀರ್ಥ ಶ್ರೀಪಾದರು.
ಅಮೆರಿಕದ ಡಲ್ಲಾಸ್​ ನಗರದಿಂದ ಸಂದೇಶ ರವಾನಿಸಿದ ಸುಗುಣೇಂದ್ರ ತೀರ್ಥ ಶ್ರೀಪಾದರು.
Published on: 

* ಸಿಎಂಗೆ ಪುತ್ತಿಗೆ ಸುಗುಣೇಂದ್ರ ಶ್ರೀ ಅಭಿನಂದನೆ

ಉಡುಪಿ: ಶ್ರೀಮಧ್ವಾಚಾರ್ಯರ ಜಯಂತಿ ಮಹೋತ್ಸವವನ್ನು ಕರ್ನಾಟಕ ಸರ್ಕಾರವೇ ಅಧಿಕೃತವಾಗಿ ಆಚರಿಸುವುದಾಗಿ ಘೋಷಿಸಿರುವುದಕ್ಕೆ ಉಡುಪಿ ಪುತ್ತಿಗೆ ಮಠದ ಯತಿಕುಲ ತಿಲಕ ಬಿರುದಾಂಕಿತ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ಧರ್ಮ ಪ್ರಸಾರಾರ್ಥವಾಗಿ ವಿಶ್ವಪರ್ಯಟನೆ ನಿರತ ಶ್ರೀಗಳು, ಅಮೆರಿಕದ ಡಲ್ಲಾಸ್​ನಿಂದ ಸಂದೇಶ ರವಾನಿಸಿದ್ದು, ಆತ್ಮೀಯರೂ, ಭಗವದ್ಭಕ್ತರೂ ಆಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಈ ವಿಚಾರವಾಗಿ ಉತ್ತಮ ಉಪಕ್ರಮ ಕೈಗೊಂಡು ಅತ್ಯಂತ ಶ್ರೇಷ್ಠ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಜಗತ್ತಿನೆಲ್ಲೆಡೆ ಮಾನ್ಯವಾಗಿರುವ ವೇದಾಂತ ಸಿದ್ಧಾಂತ ನೀಡಿದ ಹಾಗೂ ಕರ್ನಾಟಕದವರೇ ಆದ ಶ್ರೀಮಧ್ವರ ಗುರುತಿಸುವಿಕೆ ಬಹಳ ಕಾಲದ ಹಿಂದೆಯೇ ಆಗಬೇಕಿತ್ತು. ಡಿಕೆಶಿಯವರು ಆ ನ್ಯೂನತೆ ಪರಿಹಾರ ಮಾಡಿದ್ದು ಸ್ತುತ್ಯರ್ಹ ಕಾರ್ಯವಾಗಿದೆ. ಅವರ ನೇತೃತ್ವದ ಸರ್ಕಾರದಿಂದ ಧಾರ್ಮಿಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನೆರವೇರಲಿ. ಶ್ರೀಮಧ್ವರು ತಮ್ಮ ಪವಾಡದ ಮೂಲಕ ಬಂಡೆಯನ್ನು ಎತ್ತಿ ಕಲಶದಲ್ಲಿಟ್ಟಿದ್ದರು. ಅದೇರೀತಿ 'ಕನಕಪುರದ ಬಂಡೆ' ಖ್ಯಾತಿಯ ಶಿವಕುಮಾರ್​ ಸರ್ಕಾರಕ್ಕೆ ಮಧ್ವರ ಅನುಗ್ರಹ ಲಭಿಸಲಿ ಎಂದು ತಿಳಿಸಿದ್ದಾರೆ.

ವಾಯುದೇವರ ಅವತಾರವಾಗಿರುವ ಶ್ರೀಗಳು ಹಂಪೆಯಲ್ಲಿ ಹನುಮಂತನಾಗಿ, ಉಡುಪಿಯ ಪಾಜಕದಲ್ಲಿ ಮಧ್ವರಾಗಿ ಹೀಗೆ ಎರಡು ರೂಪದಿಂದ ಕಾಣಿಸಿಕೊಂಡು ಕರ್ನಾಟಕದ ಜನತೆಗೆ ವಿಶೇಷ ಅನುಗ್ರಹ ನೀಡಿದ್ದಾರೆ. ಅಂತಹ ಶ್ರೇಷ್ಠ ಗುರುವಿನ ಜಯಂತಿಯನ್ನು ಸರ್ಕಾರವೇ ಆಚರಿಸುವುದಾಗಿ ಹೇಳಿದ್ದನ್ನು ಸಮಸ್ತ ಭಕ್ತರ ಪರವಾಗಿ ಸ್ವಾಗತಿಸುತ್ತೇವೆ. ಸರ್ಕಾರದ ಈ ಕ್ರಮದಿಂದ ಮಧ್ವಾಚಾರ್ಯರ ಮಹಾನ್​ ಸಾಧನೆ, ತತ್ತ್ವಸಿದ್ಧಾಂತ ಹಾಗೂ ಅವರು ವಿಶ್ವಕ್ಕೆ ನೀಡಿದ ಅಮೂಲ್ಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಸುಗುಣೇಂದ್ರ ಶ್ರೀ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net