ಉಡುಪಿ: ಕರ್ನಾಟಕದ ಸಂಗೀತದ ಕ್ಷೇತ್ರಕ್ಕೆ ಶಾಮಾ ಶಾಸ್ತ್ರಿ, ತ್ಯಾಗರಾಜರು ಹಾಗೂ ಮುತ್ತುಸ್ವಾಮಿ ದೀಕ್ಷಿತ ಅವರು ನೀಡಿದ ಕೊಡುಗೆ ಸಾರ್ವಕಾಲಿಕ. ತಂಜಾವೂರಿನ ತಿರುವಾಂಕನೂರಿನಲ್ಲಿ ಜನಿಸಿದ, ಸಮಕಾಲೀನರಾದ ಈ ಮೂವರೂ ಸ್ನೇಹಿತರು ಎಷ್ಟೇ ಶತಮಾನ ಕಳೆದರೂ ಕರ್ನಾಟಕ ಸಂಗೀತ ಕ್ಷೇತ್ರದ ಹೊಳಪು ಮಾಸದಂತೆ ಗಟ್ಟಿಯಾದ ಛಾಪು ಮೂಡಿಸಿದ್ದಾರೆ. ಜ್ಞಾನ, ಭಕ್ತಿ, ವೈರಾಗ್ಯದ ಪ್ರತಿಭೆಯಿಂದ ಹಲವು ನೂತನ ರಾಗ ಕಂಡು ಹಿಡಿದು ಸಂಗೀತ ಲೋಕಕ್ಕೆ ನೀಡಿದ್ದಾರೆ. ಪುರಂದರ ದಾಸರಂತೂ ಕರ್ನಾಟಕ ಸಂಗೀತದ ಪಿತಾಮಹರಾಗಿದ್ದಾರೆ. ಆದರೆ, ಇಂತಹ ಮಹತ್ವದ ಉತ್ಸವದಲ್ಲಿ ಯುವಜನರು ನಿರಾಸಕ್ತರಾಗುತ್ತಿರುವುದು ಖೇದಕರ ಎಂದು ನಾಟ್ಯಾಚಾರ್ಯ ಮೈಸೂರಿನ ಪ್ರೊ.ರಾಮಮೂರ್ತಿ ರಾವ್ ವಿಷಾದ ವ್ಯಕ್ತಪಡಿಸಿದರು.