ಶಿರ್ವ: ಕ್ರೀಡೆ ವಿದ್ಯಾರ್ಥಿಗಳಲ್ಲಿ ತಂಡ ಸ್ಫೂರ್ತಿ ಮತ್ತು ನಾಯಕತ್ವದ ಗುಣಗಳನ್ನು ವಿಕಸಿತಗೊಳಿಸುವ ಅತ್ಯುತ್ತಮ ಮಾಧ್ಯಮವಾಗಿದೆ. ಇಂತಹ ಪಂದ್ಯಾಟಗಳು ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಕ್ರೀಡೆಗೆ ಬ್ಯಾಂಕ್ ಸದಾ ಪ್ರೋತ್ಸಾಹ ನೀಡುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ಉಡುಪಿ ಪ್ರಾದೇಶಿಕ ಕಚೇರಿ ಮುಖ್ಯ ಪ್ರಬಂಧಕಿ ಶಜೀಲಾ ಬೀವಿ ಜೆ. ಹೇಳಿದರು.
ಶಿರ್ವದ ಮೂಲ್ಕಿ ಸುಂದರರಾಮ ಶೆಟ್ಟಿ ಕಾಲೇಜು, ಬ್ಯಾಂಕ್ ಆಫ್ ಬರೋಡಾ ಹಾಗೂ ಮೂಲ್ಕಿ ಸುಂದರರಾಮ ಶೆಟ್ಟಿ ಹಳೇ ವಿದ್ಯಾರ್ಥಿ ಸಂಘ ಮುಂಬೈ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೂಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ವಿಶ್ವವಿದ್ಯಾಲಯ ಮಟ್ಟದ ಪುರುಷರು ಮತ್ತು ಮಹಿಳೆಯರ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕ್‌ಆಫ್ ಬರೋಡಾ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಪ್ರಬಂಧಕ ವಿದ್ಯಾಧರ ಶೆಟ್ಟಿ ಮಾತನಾಡಿ, ಸೋಲು ಮತ್ತು ಗೆಲುವು ಸ್ಫರ್ಧೆಯ ಅವಿಭಾಜ್ಯ ಅಂಗವಾಗಿದ್ದು, ಸ್ಪರ್ಧಾತ್ಮಕ ಮನೋಭಾವದಿಂದ ಆಟವಾಡಿ ಕ್ರೀಡೆಯ ಘನತೆ ಮೆರೆಯಬೇಕು ಎಂದರು.
ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡಾ ಶಿರ್ವ ಶಾಖೆ ಮುಖ್ಯ ಪ್ರಬಂಧಕ ಜೆನಿಫರ್ ಎಂ. ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ.ಮಿಥುನ್ ಚಕ್ರವರ್ತಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಹೇಮಲತಾ ಶೆಟ್ಟಿ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಸೌಮ್ಯಾ ಕುಮಾರಿ ವಂದಿಸಿದರು.