ಸಮಸ್ಯೆ ಪರಿಹಾರಕ್ಕೆ ವಿಶೇಷ ಕಂದಾಯ ಅದಾಲತ್

 ಕಡಬ ಪೊಲೀಸ್ ಉಪನಿರೀಕ್ಷಕ ಜಂಬೂರಜ್ ಮಹಾಜನ್ ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ ನಡೆಯಿತು.
ಕಡಬ ಪೊಲೀಸ್ ಉಪನಿರೀಕ್ಷಕ ಜಂಬೂರಜ್ ಮಹಾಜನ್ ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ ನಡೆಯಿತು.
Published on

ಕಡಬ: ಎಸ್ಸಿ-ಎಸ್ಟಿ ಕಾಲನಿಗಳಲ್ಲಿರುವ ಮೂಲ ಸೌಲಭ್ಯ ಕೊರತೆ, ವಿಶೇಷ ಕಂದಾಯ ಅದಾಲತ್ ಆಯೋಜನೆ, ಕಂದಾಯ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಹಾಗೂ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಮಾಸಿಕ ಕುಂದುಕೊರತೆ ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ಠಾಣೆ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮಾತನಾಡಿ, ಠಾಣಾ ವ್ಯಾಪ್ತಿಯ 19 ಗ್ರಾಮಗಳಲ್ಲಿರುವ 49 ಪರಿಶಿಷ್ಟ ಜಾತಿ, ಪಂಗಡದ ಕಾಲನಿಗಳ ಪೈಕಿ ಈಗಾಗಲೇ 17 ಕಾಲನಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಲಾಗಿದೆ. ಉಳಿದ ಎಲ್ಲ ಕಾಲನಿಗಳಿಗೂ ಶೀಘ್ರದಲ್ಲೇ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಶೇಷ ಕಂದಾಯ ಅದಾಲತ್‌ಗೆ ಆಗ್ರಹ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳು ಎದುರಿಸುತ್ತಿರುವ ಜಮೀನು ಮತ್ತು ವಸತಿ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಯಿತು. ಹಿರಿಯರ ಹೆಸರಿನಲ್ಲಿರುವ ಜಮೀನಿನ ಖಾತೆ ವಾರಸುದಾರರ ಹೆಸರಿಗೆ ಬದಲಾಗದ ಕಾರಣ ಹಲವು ಸರ್ಕಾರಿ ಸೌಲಭ್ಯಗಳಿಂದ ಸಮುದಾಯದವರು ವಂಚಿತರಾಗುತ್ತಿದ್ದಾರೆ. ಆದ್ದರಿಂದ ಪರಿಶಿಷ್ಟ ಸಮುದಾಯದ ಸಮಸ್ಯೆಗಳನ್ನು ಒಂದೇ ವೇದಿಕೆಯಲ್ಲಿ ಪರಿಹರಿಸಲು ವಿಶೇಷ ಕಂದಾಯ ಅದಾಲತ್ ನಡೆಸಬೇಕು. ಈ ಕುರಿತು ತಹಸೀಲ್ದಾರ್ ಗಮನಕ್ಕೆ ವಿಷಯ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ನಿರ್ಣಯದಂತೆ ವಿಶೇಷ ಕಂದಾಯ ಅದಾಲತ್ ನಡೆಸಲು ಜಿಲ್ಲಾಧಿಕಾರಿ, ಕಡಬ ತಹಸೀಲ್ದಾರ್ ಹಾಗೂ ವೃತ್ತ ನಿರೀಕ್ಷಕರ ಮೂಲಕ ಪುತ್ತೂರು ಉಪವಿಭಾಗಾಧಿಕಾರಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ಕಡಬ ಪಪಂ ಸದಸ್ಯೆ ಕುಸುಮಾ, ಕೆ.ಪಿ.ಆನಂದ, ಸುಂದರ ಬೈರ, ಕೇಶವ ಗಾಂಧಿಪೇಟೆ, ಆನಂದ ಮಿತ್ತಬೈಲ್, ವಸಂತ ಕುಬುಲಾಡಿ, ತಿಮ್ಮಪ್ಪ ವಿ.ಕೆ. ಮೊದಲಾದವರು ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಮಹೇಶ್ ಸ್ವಾಗತಿಸಿ, ವಂದಿಸಿದರು.

ದಲ್ಲಾಳಿಗಳ ಹಾವಳಿ ಆರೋಪ

ಕಂದಾಯ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಅವರಿಲ್ಲದೆ ಯಾವ ಕೆಲಸಗಳು ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂತು. ಕಡಬ ತಾಲೂಕು ಕಚೇರಿಯಲ್ಲೇ ಸುಮಾರು 15 ಮಂದಿ ದಲ್ಲಾಳಿಗಳು ಇದ್ದಾರೆ ಎಂದು ಕೆಲವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಐ ಜಂಬೂರಾಜ್ ಮಹಾಜನ್, ಸರ್ಕಾರಿ ಕಚೇರಿಗಳಲ್ಲಿ ಹಣದ ಬೇಡಿಕೆ ಇಟ್ಟರೆ ಅಥವಾ ಅನಗತ್ಯವಾಗಿ ಸಾರ್ವಜನಿಕರನ್ನು ಅಲೆದಾಡಿಸಿದರೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದರು. ದೂರು ಬಂದ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net