ಹೊಸ ಜೀವನ, ಅನ್ವೇಷಣೆಯ ಸಂಕೇತ ಈಸ್ಟರ್​

ಉಡುಪಿ ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಈಸ್ಟರ್​ ಭಾನುವಾರದ ಬಲಿಪೂಜೆಯ ನೇತೃತ್ವ ವಹಿಸಿದ್ದ ಧರ್ಮಗುರು ಡೆನಿಸ್​ ಡೆಸಾ ಪ್ರಾರ್ಥನೆ ಕೈಗೊಂಡರು. ಆಲ್ವಿನ್​ ಸಿಕ್ವೇರಾ ಇದ್ದರು.
ಉಡುಪಿ ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಈಸ್ಟರ್​ ಭಾನುವಾರದ ಬಲಿಪೂಜೆಯ ನೇತೃತ್ವ ವಹಿಸಿದ್ದ ಧರ್ಮಗುರು ಡೆನಿಸ್​ ಡೆಸಾ ಪ್ರಾರ್ಥನೆ ಕೈಗೊಂಡರು. ಆಲ್ವಿನ್​ ಸಿಕ್ವೇರಾ ಇದ್ದರು.
Published on

* ತೊಟ್ಟಂ ಚರ್ಚ್​ನ ಫಾದರ್​ ಡೆನಿಸ್​ ಡೆಸಾ ಸಂದೇಶ

* ಕ್ರೈಸ್ತರ ಮನೆಗಳಲ್ಲಿ ಹಬ್ಬದ ವಿಶೇಷ ಆಚರಣೆ

ಉಡುಪಿ: ಯೇಸುವಿನ ತ್ಯಾಗ ಮತ್ತು ಬಲಿದಾನ ಸ್ಮರಿಸುತ್ತ ಉಪವಾಸ ಮತ್ತು ವೃತಾಚರಣೆಯಲ್ಲಿ ತೊಡಗಿದ್ದ ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದವರು ಯೇಸುಕ್ರಿಸ್ತನ ಪುನರುತ್ಥಾನದ ಈಸ್ಟರ್​ ಹಬ್ಬವನ್ನು ಭಾನುವಾರ (ಏ.5) ಸಂಭ್ರಮದಿಂದ ಆಚರಿಸಿದರು.
ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಧರ್ಮಗುರು ವಂ.ಡೆನಿಸ್​ ಡೆಸಾ ಅವರು ಈಸ್ಟರ್​ ಭಾನುವಾರದ ಬಲಿಪೂಜೆಯ ನೇತೃತ್ವ ವಹಿಸಿದ್ದರು.ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್​ ಸಂಪಾದಕ ವಂ.ಆಲ್ವಿನ್​ ಸಿಕ್ವೇರಾ ಉಪಸ್ಥಿತರಿದ್ದರು.

ಸಾವೇ ಅಂತಿಮವಲ್ಲ

ಪ್ರವಚನ ನೀಡಿದ ಡೆನಿಸ್​ ಡೆಸಾ, ದುಷ್ಟ ಜನರ ಒಳಸಂಚಿನಿಂದ ಯೇಸುಕ್ರಿಸ್ತರು ಅನ್ಯಾಯದ ತೀರ್ಪಿಗೆ ಒಳಗಾದರು. ಶಿಲುಬೆಯಲ್ಲಿ ಘೋರ ಮರಣ ಹೊಂದಿದರೂ ಅವರು ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವ ತೋರ್ಪಡಿಸಿದ್ದರ ಸಂಭ್ರಮದ ಆಚರಣೆಯೇ ಈಸ್ಟರ್​. ಇದು ದೈವತ್ವದ ಪ್ರತಿಪಾದನೆಯಷ್ಟೇ ಅಲ್ಲ. ಹೊಸ ಜೀವನ, ಹೊಸ ಸೃಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮವಲ್ಲ ಎನ್ನುವುದುರ ಸಂಕೇತವೂ ಆಗಿದೆ ಎಂದರು.

ಚಾಪೆಲ್​ನಲ್ಲಿ ಪ್ರಾರ್ಥನೆ

ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್​ ಐಸಾಕ್​ ಲೋಬೊ ಶನಿವಾರ ರಾತ್ರಿ ಜರುಗಿದ ಪಾಸ್ಕ ಜಾಗರಣೆಯಲ್ಲಿ ಪಾಲ್ಗೊಂಡು, ಭಾನುವಾರ ತಮ್ಮ ನಿವಾಸದಲ್ಲಿನ ಚಾಪೆಲ್​ನಲ್ಲಿ ಈಸ್ಟರ್​ ಹಬ್ಬದ ನಿಮಿತ್ತ ಪ್ರಾರ್ಥನೆ ಸಲ್ಲಿಸಿದರು.

ನೆಂಟರೊಂದಿಗೆ ಭೋಜನ ಕೂಟ

ಉಡುಪಿ ಜಿಲ್ಲೆಯ ಎಲ್ಲ ಚರ್ಚ್​ಗಳಲ್ಲಿ ಭಾನುವಾರದ ಈಸ್ಟರ್​ ಹಬ್ಬದ ವಿಶೇಷ ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆ ನಡೆಯಿತು. ಮನೆಗಳಲ್ಲೂ ಸಹ ನೆಂಟರು, ಅತಿಥಿಗಳನ್ನು ಸ್ವಾಗತಿಸಿ ಅವರೊಂದಿಗೆ ಹಬ್ಬದ ವಿಶೇಷ ಊಟ ಸವಿದು ಸಂತೋಷ ಹಂಚಿಕೊಂಡರು. ಭಾನುವಾರ ಬೆಳಗ್ಗೆ ಹೊಸಬಟ್ಟೆ ಧರಿಸಿ ಖುಷಿಯಿಂದ ಚರ್ಚ್​ನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡ ಕೆಸ್ತರು, ಧರ್ಮಗುರುಗಳಿಂದ ಆಶೀರ್ವಾದ ಪಡೆದರು. ಶುಭಾಶಯ ವಿನಿಮಯ ಮಾಡಿಕೊಂಡು, ಮನೆಗಳಲ್ಲಿ ಕುಟುಂಬಿಕರು, ಸ್ನೇಹಿತರೊಂದಿಗೆ ಸೇರಿ ಹಬ್ಬ ಆಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net