ಡಿಜಿಟಲ್​ ಆ್ಯಪ್​ ಆಟೋಕ್ಕೆ ಪರವಾನಗಿ ಕಡ್ಡಾಯ

ಉಡುಪಿ ಡಿಸಿ ಕಚೇರಿಯಲ್ಲಿ ಸ್ವರೂಪಾ ಟಿ.ಕೆ ಆಟೋ ಚಾಲಕ-ಮಾಲೀಕರೊಂದಿಗೆ ಸಭೆ ನಡೆಸಿದರು. ಯಶ್​ಪಾಲ್​ ಸುವರ್ಣ, ಹರಿರಾಂ ಶಂಕರ್​ ಇತರರಿದ್ದರು.
ಉಡುಪಿ ಡಿಸಿ ಕಚೇರಿಯಲ್ಲಿ ಸ್ವರೂಪಾ ಟಿ.ಕೆ ಆಟೋ ಚಾಲಕ-ಮಾಲೀಕರೊಂದಿಗೆ ಸಭೆ ನಡೆಸಿದರು. ಯಶ್​ಪಾಲ್​ ಸುವರ್ಣ, ಹರಿರಾಂ ಶಂಕರ್​ ಇತರರಿದ್ದರು.
Published on

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

* ಚಾಲಕ-ಮಾಲೀಕರೊಂದಿಗೆ ವಿಶೇಷ ಸಭೆ

ಉಡುಪಿ: ನಗರ ವ್ಯಾಪ್ತಿಯಲ್ಲಿ ಕೆಲವು ಸಂಸ್ಥೆಗಳು ಡಿಜಿಟಲ್​ ಆ್ಯಪ್​ ಆಧಾರಿತ ಆಟೋ (ಸಾರ್ವಜನಿಕ ಸಾಗಾಣಿಕೆ)ಸೇವೆ ಒದಗಿಸುತ್ತಿದ್ದು, ಇದಕ್ಕೆ ಸರ್ಕಾರದ ಪರವಾನಗಿ ಪತ್ರ ಪಡೆಯುವುದು ಕಡ್ಡಾಯ. ಇದಕ್ಕೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದ್ದು, ಅಗತ್ಯ ದಾಖಲೆಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮುಂದೆ ಹಾಜರುಪಡಿಸಿದರೆ ಸ್ಥಳಿಯ ಆಟೋ ಚಾಲಕರ ಯೂನಿಯನ್​ಗಳೊಂದಿಗೆ ಸಾಧಕ-ಬಾಧಕ ಚರ್ಚಿಸಲಾಗುವುದು. ಸೂಕ್ತವಿದ್ದಲ್ಲಿ ಮಾತ್ರ ಆಟೋ ಚಲಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ನಮ್ಮ ಯಾತ್ರಿ ಆ್ಯಪ್​ ಹಾಗೂ ರ್ಯಾಪಿಡ್​ ಆ್ಯಪ್​ ಆಟೋ ಸಂಚಾರ ಕುರಿತು ಆಟೋ ಚಾಲಕರ ಮತ್ತು ಮಾಲೀಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೋಮವಾರ (ಫೆ.2) ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು.

ಮೀಟರ್​ ಬಳಕೆ ಕಡ್ಡಾಯ

ಉಡುಪಿ ನಗರದ ವಲಯ-1ರಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಆಟೋಗಳ ನೋಂದಣಿ ಆಗಿದ್ದು, ನಿಲ್ದಾಣಗಳಲ್ಲಿ ಸರದಿಯಂತೆ ಸೇವೆ ಒದಗಿಸುತ್ತಿದ್ದಾರೆ. ಕೆಲವರು ಹಲವು ವರ್ಷದಿಂದ ಈ ವೃತ್ತಿ ಮಾಡಿಕೊಂಡು ಬರುತ್ತಿದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆಯಲಾಗುವುದು. ಪ್ರಸ್ತುತ ಚಾಲನೆಯಲ್ಲಿರುವ ಎಲ್ಲ ಆಟೋಗಳು ಕಡ್ಡಾಯವಾಗಿ ಮೀಟರ್​ ಬಳಕೆ ಮಾಡಬೇಕು ಎಂದು ಡಿಸಿ ಸ್ವರೂಪಾ ಸಲಹೆ ನೀಡಿದರು.

ಮೂಲ ಸೌಕರ್ಯ ಕಲ್ಪಿಸಿ

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಉಡುಪಿ ನಗರದಲ್ಲಿ ಸಂಚರಿಸುವ ಜನರು ಹಾಗೂ ಪ್ರವಾಸಿಗರ ಬೇಡಿಕೆ ಮತ್ತು ಆಟೋ ನಿಲ್ದಾಣಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಬಾಡಿಗೆ ಮಾಡಲು ಅವಕಾಶ ನೀಡಬೇಕು. ನಿಲ್ದಾಣಗಳಲ್ಲಿ ಚಾಲಕರುಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಗಮನಹರಿಸಬೇಕು. ಡಿಜಿಟಲ್​ ಆ್ಯಪ್​ ಆಧಾರಿತ ಆಟೋ ಸಂಚಾರದಿಂದ 25&30 ವರ್ಷದಿಂದ ಆಟೋ ಚಾಲನೆಯಿಂದಲೇ ಜೀವನ ನಡೆಸುತ್ತಿರುವವರಿಗೆ ಸಮಸ್ಯೆ ಆಗಬಹುದು. ಸೂಕ್ತ ಚರ್ಚೆ ಅಗತ್ಯ ಎಂದರು.
ಸಭೆಯಲ್ಲಿ ನಗರಸಭಾ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಂತೋಷ್​ ಶೆಟ್ಟಿ, ಆಟೋ ಯೂನಿಯನ್​ ಪದಾಧಿಕಾರಿಗಳು, ಚಾಲಕರು ಹಾಗೂ ಮಾಲೀಕರು ನಮ್ಮ ಯಾತ್ರಿ ಹಾಗೂ ರ್ಯಾಪಿಡ್​ ಆ್ಯಪ್​ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
"

ನಗರ ವಲಯ-2ರಲ್ಲಿ ಪರವಾನಗಿ ಪಡೆದು ನಗರ ವ್ಯಾಪ್ತಿಯಲ್ಲಿ ಆಟೋ ಚಾಲನೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆಟೋ ನಿಲ್ದಾಣಗಳಲ್ಲಿ ಈ ಹಿಂದೆ ನೋಂದಣಿ ಹೊಂದಿದವರಿಗೆ ಮಾತ್ರ ಅವಕಾಶ ಇದೆ. ನಿಲ್ದಾಣ ಹೊಂದದೇ ಇರುವ ಅಟೋ ಚಾಲಕರು ನೋಂದಣಿಗೆ ಅರ್ಜಿ ಸಲ್ಲಿಸಿದರೆ ಅಲ್ಲಿನ ಆಟೋ ದಟ್ಟಣೆ ನೋಡಿ ನಗರಸಭೆಯೊಂದಿಗೆ ಚರ್ಚಿಸಿ ಅನುಮತಿ ನೀಡಲಾಗುವುದು. ವಲಯ-1 ಹಾಗೂ ವಲಯ-2ರಲ್ಲಿ ಸಂಚರಿಸುವ ಆಟೋಗಳಿಗೆ ಕಲರ್​ ಕೋಡಿಂಗ್​ ಅಳವಡಿಸುವುದು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net