ಯೋಧಗೆ ಹುಟ್ಟೂರಲ್ಲಿ ಅಂತಿಮ ವಿಧಿವಿಧಾನ

  ಸಿಐಎಸ್‌ಎಫ್ ಯೋಧ ಸೀತಾರಾಮ ಗೌಡರ ಪಾರ್ಥೀವ ಶರೀರಕ್ಕೆ ಸಿಐಎಸ್‌ಎಫ್ ಬೆಟಾಲಿಯನ್‌ನಿಂದ ಗೌರವ ವಂದನೆ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ಉಪ ತಹಸೀಲ್ದಾರ್ ಸಯ್ಯದುಲ್ಲಾ ಖಾನ್, ಕೊಲ ಗ್ರಾಪಂ ಪಿಡಿಒ ಸಂದೇಶ್ ಮೊದಲಾದವರಿದ್ದರು.
ಸಿಐಎಸ್‌ಎಫ್ ಯೋಧ ಸೀತಾರಾಮ ಗೌಡರ ಪಾರ್ಥೀವ ಶರೀರಕ್ಕೆ ಸಿಐಎಸ್‌ಎಫ್ ಬೆಟಾಲಿಯನ್‌ನಿಂದ ಗೌರವ ವಂದನೆ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ಉಪ ತಹಸೀಲ್ದಾರ್ ಸಯ್ಯದುಲ್ಲಾ ಖಾನ್, ಕೊಲ ಗ್ರಾಪಂ ಪಿಡಿಒ ಸಂದೇಶ್ ಮೊದಲಾದವರಿದ್ದರು.
Published on
ಕಡಬ: ಮಂಗಳೂರಿನ ಕೆಪಿಟಿ ಬಳಿ ಬುಧವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೊಲ ಗ್ರಾಮದ ಪುತ್ಯೆ ನಿವಾಸಿ ಪರಮೇಶ್ವರ ಗೌಡ ಪುತ್ರ, ಸಿಐಎಸ್‌ಎಫ್ ಯೋಧ ಸೀತಾರಾಮ ಗೌಡ(50) ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ಹುಟ್ಟೂರಲ್ಲಿ ನಡೆಯಿತು.
ಸೀತಾರಾಮ ಗೌಡ ಸಿಐಎಸ್‌ಎಫ್‌ನಲ್ಲಿ ಜಮ್ಮುವಿನ ಸೆಂಟ್ರಲ್ ಜೈಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು ಜು.3ರಂದು ರಜೆ ಮೇಲೆ ಊರಿಗೆ ಬಂದವರು ಮಂಗಳೂರಿನಲ್ಲಿನ ಮನೆಯಲ್ಲಿ ವಾಸವಿದ್ದರು. ಮಂಗಳವಾರ ಎಸ್‌ಐಆರ್ ದಾಖಲಾತಿ ನೀಡಲು ಕೊಲದ ಮನೆಗೆ ಬಂದವರು ಬುಧವಾರ ವಾಪಸ್ ಮಂಗಳೂರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ರಾ.ಹೆ. 66ರ ಕೆಪಿಟಿ ಬಳಿ ಅಪಘಾತವಾಗಿತ್ತು.
ಗಂಭೀರ ಗಾಯಗೊಂಡಿದ್ದ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಪತ್ನಿ ರೋಹಿಣಿ ನೀಡಿದ ದೂರಿನಂತೆ ಮಂಗಳೂರು ಪೂರ್ವ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಮಂಗಳೂರಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹ ಹುಟ್ಟೂರಿಗೆ ಕರೆತರಲಾಯಿತು. ಮನೆಯಲ್ಲಿ ಸಿಐಎಸ್‌ಎಫ್ ಬೆಟಾಲಿಯನ್‌ನಿಂದ ಗೌರವ ವಂದನೆ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ಕಡಬ ತಾಲೂಕು ಆಡಳಿತ ಸೌಧದ ಉಪ ತಹಸೀಲ್ದಾರ್ ಸಯ್ಯದುಲ್ಲಾ ಖಾನ್, ಕೊಲ ಗ್ರಾಪಂ ಪಿಡಿಒ ಸಂದೇಶ್ ಸೇರಿದಂತೆ ನಿವೃತ್ತ ಯೋಧರು, ಜನಪ್ರತಿನಿಧಿಗಳು, ವಿವಿಧ ಸಂಸ್ಥೆಗಳ ಮುಖಂಡರು ಅಂತಿಮ ನಮನ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net