ಉಡುಪಿಯಲ್ಲಿ ಆಯೋಜಿಸಿದ್ದ ಬೀದಿ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ತಲ್ಲೂರು ಶಿವರಾಂ ಶೆಟ್ಟಿ ಮಾತನಾಡಿದರು. ರಂಜನ್ ಕಲ್ಕೂರ, ರಾಜಗೋಪಾಲ ಬಲ್ಲಾಳ್, ಭಾಸ್ಕರ ರಾವ್ ಕಿದಿಯೂರು, ಜಿ.ಪಿ. ಪ್ರಭಾಕರ್ ಇದ್ದರು.
ಉಡುಪಿ: ನಾಡು ಬೆಳೆದು ಕಾಡು ಕಣ್ಮರೆಯಾಗುತ್ತಿರುವ ಕಾಲದಲ್ಲಿ ಮನೆ ಮುಂದಿನ ತುಳಸಿ ಗಿಡದಿಂದ ಹಿಡಿದು ನಮ್ಮ ಪರಿಸರದಲ್ಲಿ ಮರ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಗಿಡ-ಮರಗಳನ್ನು ಜೀವನದ ಅಂಗವಾಗಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಬವಣೆ, ಸಾಮಾಜಿಕ ಸಂಘರ್ಷಗಳ ಕುರಿತಾಗಿ ಬೀದಿ ನಾಟಕಗಳು ಬೆಳಕು ಚೆಲ್ಲಿ ಜಾಗೃತಿ ಉಂಟು ಮಾಡುತ್ತಿವೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಂ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ರಂಗಭೂಮಿ ಉಡುಪಿ ಆಶ್ರಯದಲ್ಲಿ ಭಾನುವಾರ ಸಂಜೆ (ಡಿ.14) 'ಕಿನ್ನರ ಮೇಳ ತುಮರಿ' ಪ್ರಸ್ತುತಿಯಲ್ಲಿ, ಡಾ.ಚಂದ್ರಶೇಖರ್ ಕಂಬಾರ ರಚನೆಯ ಮೂರು ಕಥೆಗಳನ್ನು ಆಧರಿಸಿದ ಮರವೇ ಮರ್ಮರವೇ..! ಎಂಬ ಬೀದಿ ನಾಟಕದ ಪ್ರಥಮ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ರಂಜನ್ ಕಲ್ಕೂರ ಅವರು ತಮಟೆ ಬಾರಿಸುವ ಮೂಲಕ ನಾಟಕ ಪ್ರದರ್ಶನ ಉದ್ಘಾಟಿಸಿ, ಶುಭಹಾರೈಸಿದರು.
ನಾಟಕಕ್ಕೆ ಕೆ.ಜಿ. ಕೃಷ್ಣಮೂರ್ತಿ ಅವರ ಪರಿಕಲ್ಪನೆ ಹಾಗೂ ವಿನ್ಯಾಸ, ಸಜಿ ಆರ್. ತುಮರಿ ಹಾಗೂ ಅರುಣ್ ಎನ್. ನಿರ್ದೇಶನ, ಸಂಗೀತ- ದಿಗ್ವಿಜಯ ಹೆಗ್ಗೋಡು ಸಾರಥ್ಯದಲ್ಲಿ ನಾಟಕ ಪ್ರದರ್ಶನಗೊಂಡಿತು.
"
ರಂಗಭೂಮಿ ಉಡುಪಿ 60 ಸಂವತ್ಸರ ಕಂಡಿದ್ದು ಸಾಮಾಜಿಕ ಜಾಗೃತಿ, ಸಂದೇಶ ಸಾರುವ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಕೋವಿಡ್ ಕಾಲದಲ್ಲಿ ನಡೆದಿರಲಿಲ್ಲ. ಇದೀಗ ಮತ್ತೆ ಅಭಿಯಾನ ಪ್ರಾರಂಭಿಸಲಾಗಿದೆ.