ಶತಮಾನದ ಶಾಲೆಯಲ್ಲಿ ಆರೇ ಮಕ್ಕಳು

 ಕೋಟೆ ಮುಂಡುಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಕೋಟೆ ಮುಂಡುಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
Published on

ರತ್ನಾಕರ ಸುಬ್ರಹ್ಮಣ್ಯ

ಕಳಂಜ ಗ್ರಾಮದ ಕೋಟೆಮುಂಡುಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಕಂಡು 20 ವರ್ಷ ಕಳೆಯಿತು. ಶತಮಾನದ ಸಂದರ್ಭ ಅದ್ದೂರಿ ಶತಮಾನೋತ್ಸವ ಸಮಾರಂಭ ನಡೆದಿತ್ತು. ಆದರೀಗ ಶಾಲೆಯಲ್ಲಿ ಮಕ್ಕಳ ಕೊರತೆ ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ಈ ಶಾಲೆ ಮುಚ್ಚುವ ಭೀತಿ ಎದುರಾಗಿದೆ.
ಒಂದು ಕಾಲದಲ್ಲಿ 300ಕ್ಕೂ ಅಧಿಕ ಮಕ್ಕಳಿದ್ದ ಶಾಲೆಯಲ್ಲೀಗ 1ರಿಂದ 7 ತರಗತಿ ತನಕ ಕೇವಲ ಆರು ಮಕ್ಕಳಿದ್ದಾರೆ. 120 ವರ್ಷಗಳ ಇತಿಹಾಸವುಳ್ಳ ವಿದ್ಯಾದೇಗುಲ ಮುಚ್ಚದೆ ಮತ್ತೆ ಮಕ್ಕಳ ಸಂಖ್ಯೆ ಹೆಚ್ಚಿ ಗತಕಾಲದ ಇತಿಹಾಸ ಮರುಕಳಿಸಬೇಕೆಂದು ವಿದ್ಯಾಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಕಳೆದ ಸಾಲಿನಲ್ಲಿ 18 ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತಿದ್ದರು. ಅದರಲ್ಲಿ ಏಳನೇ ತರಗತಿಯಲ್ಲಿದ್ದ 5 ವಿದ್ಯಾರ್ಥಿಗಳು ಬೇರೆ ಶಾಲೆಗೆ ತೆರಳಿದ್ದು, 6ನೇ ತರಗತಿಯಿಂದ ಮೂವರು, 4ರಿಂದ ಒಬ್ಬರು, 3ರಿಂದ ಮೂವರು, 1ರಿಂದ ಓರ್ವ ವಿದ್ಯಾರ್ಥಿ ಬೇರೆ ಶಾಲೆಗೆ ತೆರಳಿದ್ದಾರೆ. ಇತ್ತ ಒಂದನೇ ತರಗತಿಗೆ ಯಾವೊಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಓರ್ವ ವಿದ್ಯಾರ್ಥಿ ಹೊಸದಾಗಿ ಬಂದಿದ್ದು ಶಾಲೆಯಲ್ಲಿ ಪ್ರಸ್ತುತ 6 ಮಕ್ಕಳಿದ್ದಾರೆ. ಎರಡು, ಮೂರು, ನಾಲ್ಕು ತರಗತಿಗಳಲ್ಲಿ ತಲಾ ಒಂದೊಂದು, ಏಳರಲ್ಲಿ ಮೂರು ಮಕ್ಕಳಿದ್ದಾರೆ. ಮುಂದಿನ ವರ್ಷ ಏಳನೇ ತರಗತಿಯ ಮಕ್ಕಳು ಶಾಲೆ ಬಿಟ್ಟು ತೆರಳಲಿದ್ದು ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕಿಳಿಯಲಿದೆ.
1906ರಲ್ಲಿ ಸ್ಥಾಪನೆ: 1906ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭವಾದ ಸಂಸ್ಥೆ 1980ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. 1.50 ಎಕರೆ ಜಾಗ ಹೊಂದಿರುವ ಇಲ್ಲಿ ದೊಡ್ಡ ಮೈದಾನವಿದೆ. ಉತ್ತಮವಾದ ಶಾಲಾ ಕಟ್ಟಡ, ಬಾಲಕ-ಬಾಲಕಿಯರ ಶೌಚಗೃಹ, ಅಕ್ಷರ ದಾಸೋಹ ಕಟ್ಟಡ, ಫಸಲು ಬರುವ ತೆಂಗಿನ ಗಿಡಗಳು, ಆವರಣ ಗೋಡೆ ಇದೆ. ಶಾಲಾ ಕಾಂಪೌಂಡ್ ಒಳಗಡೆ ಅಂಗನವಾಡಿ ಇದೆ. ಸಾಕಷ್ಟು ಹೆಸರು ಮಾಡಿರುವ ಸಾಹಿತಿಗಳು, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಶಿಧರ ಕೋಟೆ, ದೆಹಲಿಯಲ್ಲಿ ಹೆಸರು ಮಾಡಿದ ವಸಂತ ಶೆಟ್ಟಿ, ಉದ್ಯಮಿ ರಘುರಾಮ ಕೋಟೆ ಸೇರಿದಂತೆ ಸಹಸ್ರಾರು ಮಂದಿಗೆ ವಿದ್ಯೆ ನೀಡಿದ ಶಾಲೆ ಇದಾಗಿದೆ.
ಅಂಗನವಾಡಿ ಇದೆ
ಶಾಲಾ ಕಾಂಪೌಂಡ್ ಒಳಗಡೆ ಅಂಗನವಾಡಿ ಇದೆ. ಆದರೆ ಅಲ್ಲಿಯೂ ಮಕ್ಕಳ ಕೊರತೆ ಇದೆ. ಕಳೆದ ಕೆಲ ವರ್ಷಗಳ ಬಳಿಕ ಮಕ್ಕಳ ಕೊರತೆ ಎದುರಿಸುತಿದ್ದ ಅಂಗನವಾಡಿಯಲ್ಲಿ ಈ ಬಾರಿ ಏಳು ಮಕ್ಕಳು ದಾಖಲಾಗಿದ್ದಾರೆ. ಮುಂದಿನ ವರ್ಷವೂ ಒಂದನೇ ತರಗತಿಗೆ ಕೋಟೆಮುಂಡುಗಾರು ಶಾಲೆಗೆ ಸೇರಬಹುದಾದ ಯಾವುದೇ ಮಕ್ಕಳು ಇಲ್ಲಿಲ್ಲ.

ಮುಂದಿನ ವರ್ಷದಿಂದ ಒಬ್ಬರೇ ಶಿಕ್ಷಕಿ

ಸಾಕಷ್ಟು ವಿದ್ಯಾರ್ಥಿಗಳಿದ್ದ ಕಾಲದಲ್ಲಿ ಪ್ರತಿ ತರಗತಿಗೊಂದರಂತೆ ಶಿಕ್ಷಕರಿದ್ದರು. ಬರಬರುತ್ತಾ ಶಿಕ್ಷಕರ ಕೊರತೆಯೂ ಎದುರಾಯಿತು. ಇತ್ತೀಚಿನ ಕೆಲ ವರ್ಷಗಳಿಂದ ಮೂರೇ ಶಿಕ್ಷಕರು ಒಂದರಿಂದ ಏಳನೇ ತರಗತಿ ತನಕ ಪಾಠ ಮಾಡುತ್ತಿದ್ದರು. ಹೀಗೆ ಮಕ್ಕಳ ಸಂಖ್ಯೆಯೊಂದಿಗೆ ಶಿಕ್ಷಕರ ಸಂಖ್ಯೆಯೂ ಕಡಿಮೆ ಆಗಿದೆ. ಇದೀಗ ನಾಲ್ಕು ವಿದ್ಯಾರ್ಥಿಗಳಿರುವ ಕ್ಲಾಸ್‌ಗೆ ಇಬ್ಬರು ಶಿಕ್ಷಕರಿದ್ದಾರೆ. ಈ ಪೈಕಿ ಓರ್ವ ಗೌರವ ಶಿಕ್ಷಕಿಯನ್ನು ಮುಂದಿನ ತಿಂಗಳಿನಿಂದ ಬೇರೆ ಶಾಲೆಗೆ ನಿಯೋಜಿಸಲಾಗುತ್ತದೆ ಎನ್ನಲಾಗಿದೆ. ನಂತರ ಒಬ್ಬರೇ ಶಿಕ್ಷಕಿ ಶಾಲೆ ನಡೆಸಬೇಕು. ಅವರು ಕಚೇರಿ ಕೆಲಸ ನೋಡಿಕೊಳ್ಳಬೇಕು. ಅವರಿಗೆ ರಜೆ ಬೇಕಾದರೆ ಶಾಲೆಗೂ ರಜೆ ಸಾರಬೇಕಾಗಬಹುದು.

ನಮ್ಮ ಶಾಲೆಯಲ್ಲಿ ಮಕ್ಕಳ ಕೊರತೆ ಉಂಟಾಗಿದೆ. ಏಳನೇ ತರಗತಿ ತನಕ ಆರು ಮಕ್ಕಳಿಗೆ ಓರ್ವ ಶಿಕ್ಷಕಿಯನ್ನು ನೀಡಿದರೆ ಮುಂದಿನ ವರ್ಷ ಈ ವಿದ್ಯಾರ್ಥಿಗಳೂ ಬೇರೆ ಶಾಲೆಗೆ ತೆರಳಬಹುದು. ಎಲ್ಲ ತರಗತಿಗೂ ಶಿಕ್ಷಕರಿಲ್ಲದೆ ಈ ರೀತಿಯಾಗಿದೆ. ನನ್ನ ಮಗಳು 2ನೇ ತರಗತಿಯಲ್ಲಿದ್ದರೆ, ಮಗ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಮಕ್ಕಳ ಸಂಖ್ಯೆ ಹೆಚ್ಚಿದರೆ ಒಳ್ಳೆಯದು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ನಾವು ಪ್ರಯತ್ನ ಪಡುತ್ತೇವೆ. ಅದು ಸಾಧ್ಯವಾಗದಿದ್ದರೆ ಅನಿವಾರ್ಯವಾಗಿ ನಾನೂ ಕೂಡಾ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಬೇಕಾಗುತ್ತದೆ.

— ಗೀತಾ, ಅಧ್ಯಕ್ಷರು, ಎಸ್‌ಡಿಎಂಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net