ಕುಸುಮ್ ಸೋಲಾರ್ ಯೋಜನೆಗೆ ಸ್ಥಳ ಮಂಜೂರಾತಿ

 ಕುಸುಮ್ ಸೋಲಾರ್ ಯೋಜನೆಗೆ ಸ್ಥಳ ಮಂಜೂರಾತಿ ವಿಳಂಬದಲ್ಲಿ ಮಧ್ಯಪ್ರವೇಶಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಎ .ಕಿರಣ್ ಕುಮಾರ್ ಕೊಡ್ಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕುಸುಮ್ ಸೋಲಾರ್ ಯೋಜನೆಗೆ ಸ್ಥಳ ಮಂಜೂರಾತಿ ವಿಳಂಬದಲ್ಲಿ ಮಧ್ಯಪ್ರವೇಶಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಎ .ಕಿರಣ್ ಕುಮಾರ್ ಕೊಡ್ಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
Published on
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕುಸುಮ್ ಸೋಲಾರ್ ಯೋಜನೆ ಅನುಷ್ಠಾನಕ್ಕೆ ಸರ್ಕಾರಿ ಜಾಗವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದರೂ ಅರಣ್ಯ ಇಲಾಖೆ ತಡೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ. ಕೇಂದ್ರ ಸರ್ಕಾರ ಮಂಜೂರು ಮಾಡಿದ 20 ಕೋಟಿ ರೂ. ಅನುದಾನ ವಾಪಸ್ ಹೋಗುವ ಸಾಧ್ಯತೆ ಇರುವುದರಿಂದ ಮಧ್ಯ ಪ್ರವೇಶಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಕಾವಡಿ, ಬೈಂದೂರಿನ ಕಿರಿಮಂಜೇಶ್ವರ, ಕಾಪುವಿನ ಬೆಳ್ಳೆ, ಉಡುಪಿಯ ಅಂಜಾರು ಮತ್ತು ಬಡಗುಬೆಟ್ಟು ಗ್ರಾಪಂಗಳಲ್ಲಿ ಕುಸುಮ್ ಯೋಜನೆಗೆ ಜಾಗ ನಿಗದಿಪಡಿಸಲಾಗಿತ್ತು. ಆದರೆ ಮಂಜೂರಾದ ಸ್ಥಳದಲ್ಲಿ ಅಕೇಶಿಯ ಗಿಡಗಳಿರುವ ಕಾರಣ ಅರಣ್ಯ ಇಲಾಖೆ ಅನುಮತಿ ನೀಡದಿರುವುದರಿಂದ ಯೋಜನೆ ಸ್ಥಗಿತಗೊಂಡಿದೆ ಎಂದು ವಿವರಿಸಿದ ಅವರು, ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಕುಸುಮ್ ಅಡಿಯಲ್ಲಿ ರೈತರಿಗೆ ಹಗಲಿನಲ್ಲಿ ವಿದ್ಯುತ್ ಪೂರೈಕೆ ಹಾಗೂ ಹೆಚ್ಚುವರಿ ವಿದ್ಯುತ್ ಮಾರಾಟದಿಂದ ಗ್ರಾಪಂಗಳಿಗೆ ಆದಾಯ ಬರಲಿದೆ. ಆದ್ದರಿಂದ ವಿಳಂಬ ತಡೆಯಲು ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾಹಿತಿ ಪಡೆದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕೂಡಲೇ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿ, ಮಂಜೂರಾದ ಸ್ಥಳದಲ್ಲಿರುವ ಅಕೇಶಿಯ ಗಿಡಗಳನ್ನು ತೆರವುಗೊಳಿಸಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಅವಕಾಶ ಒದಗಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net