ಭರ್ತಿ ಮಾಡಿದ ಎಸ್​ಐಆರ್​ ಫಾರ್ಮ್ ತ್ವರಿತ ಹಿಂದಿರುಗಿಸಿ

ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಎಸ್​ಐಆರ್​ ಸಭೆಯಲ್ಲಿ ಸ್ವರೂಪಾ ಟಿ.ಕೆ ಮಾತನಾಡಿದರು. ಅಬೀದ್​ ಗದ್ಯಾಳ್​, ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿ-, ಸಿಬ್ಬಂದಿ ಹಾಗೂ ರಾಜಕೀಯ ಪಕ್ಷಗಳ ಪ್ರಮುಖರು ಇದ್ದರು.
ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಎಸ್​ಐಆರ್​ ಸಭೆಯಲ್ಲಿ ಸ್ವರೂಪಾ ಟಿ.ಕೆ ಮಾತನಾಡಿದರು. ಅಬೀದ್​ ಗದ್ಯಾಳ್​, ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿ-, ಸಿಬ್ಬಂದಿ ಹಾಗೂ ರಾಜಕೀಯ ಪಕ್ಷಗಳ ಪ್ರಮುಖರು ಇದ್ದರು.
Published on

* ಜಿಲ್ಲೆಯ ಮತದಾರರಿಗೆ ಡಿಸಿ ಸ್ವರೂಪಾ ಕರೆ

* ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ

ಉಡುಪಿ: ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಕಾರಾತ್ಮಕವಾಗಿ ಸಹಕರಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಎಲ್ಲ ಮನೆಗಳಿಗೆ ತೆರಳಿ ಗಣತಿ ನಮೂನೆ ವಿತರಿಸಲಾಗಿದೆ. ಅವುಗಳನ್ನು ತ್ವರಿತ ಭರ್ತಿ ಮಾಡಿ ಸಂಬಂಧಿತ ಮತಗಟ್ಟೆ ಅಧಿಕಾರಿಗಳಿಗೆ ಸಾರ್ವಜನಿಕರು ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಕುರಿತು ಮಂಗಳವಾರ (ಜು.14) ಆಯೋಜಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಎಸ್​ಐಆರ್​ ನಮೂನೆಗಳ ವಿತರಣೆ ಕಾರ್ಯ ಶೇ.99.97 ಪೂರ್ಣಗೊಂಡಿದೆ ಎಂದರು.
ಡಿಜಿಟಲೀಕರಣ ಕಾರ್ಯ
ಜಿಲ್ಲೆಯಲ್ಲಿ ಒಟ್ಟು 10,63,876 ಮತದಾರರಿದ್ದು ಜು.14ರ ವರೆಗೆ 10,63,451 ಮತದಾರರಿಗೆ ಎನ್ಯುಮರೇಷನ್​ ಫಾರ್ಮ್ ವಿತರಿಸಲಾಗಿದೆ. 3,22,027 ಗಣತಿ ನಮೂನೆ ಡಿಜಿಟಲೀಕರಣಗೊಳಿಸಿ ಶೇ.30.27 ಪ್ರಗತಿಯಾಗಿರುತ್ತದೆ. 1,647 ಮತದಾರರು ಮೃತಪಟ್ಟಿರುವುದು ತಿಳಿದು ಬಂದಿದೆ. 1,166 ಮತದಾರರು ಕಾಯಂ ಆಗಿ ಬೇರೆಡೆಗೆ ವರ್ಗಾವಣೆಗೊಂಡಿದ್ದು, 396 ಮತದಾರರು ತಮ್ಮ ದಾಖಲಾತಿ ಮಾಡಿದ್ದಾರೆ. ಗಣತಿ ನಮೂನೆಗಳನ್ನು ಭರ್ತಿ ಮಾಡಿ ಬೇಗ ನೀಡಿದರೆ ಅವುಗಳ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲು ಬಿಎಲ್​ಒಗಳಿಗೆ ಅನುಕೂಲವಾಗಲಿದೆ. ಕೊನೆಯ ಗಳಿಗೆಯಲ್ಲಿ ನೀಡಿದರೆ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿ, ಸಿಬ್ಬಂದಿ ಹಾಗೂ ಜಿಲ್ಲೆಯಲ್ಲಿ ಮಾನ್ಯತೆ ಪಡೆದ ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಬಿಎಲ್​ಒ, ಬಿಎಲ್​ಎ ಗಳಿಗೆ ವಿಶೇಷ ತರಬೇತಿ 

ಭಾರತ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್​ಐಆರ್​ ಕಾರ್ಯವು ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದ್ದು, ಜಿಲ್ಲೆಯಲ್ಲಿ ಯಶ ಕಾಣಲು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಸಹಭಾಗಿತ್ವವೂ ಅತ್ಯಗತ್ಯ. ಗಣತಿ ನಮೂನೆ ಭರ್ತಿ ಮಾಡುವಾಗ ಸಾರ್ವಜನಿಕರಲ್ಲಿ ಉಂಟಾಗುವ ಗೊಂದಲಗಳ ತಪ್ಪಿಸಲು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಫಾರ್ಮ್​ ಮೊದಲ ಭಾಗ ಹಾಗೂ ಎರಡನೇ ಭಾಗ ಭರ್ತಿ ಮಾಡುವಾಗ ಆಗುವ ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಬಿಎಲ್​ಒ ಮತ್ತು ಬಿಎಲ್​ಎ ಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬೂತ್​ ಮಟ್ಟದ ಏಜೆಂಟರು ಸಂಪೂರ್ಣ ಸಹಕಾರ ನೀಡಬೇಕು ಎಂದು ಡಿಸಿ ಸ್ವರೂಪಾ ಮನವಿ ಮಾಡಿದರು.
"

ಜಿಲ್ಲೆಯಲ್ಲಿ ಈವರೆಗೆ ಬೈಂದೂರು, ಕುಂದಾಪುರ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶೇ.100ರಷ್ಟು ಮತದಾರರಿಗೆ ಎನ್ಯುಮರೇಷನ್​ ಫಾರ್ಮ್ ವಿತರಿಸಲಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 425 ಫಾಮ್​ರ್ ವಿತರಣೆಗೆ ಬಾಕಿ ಇದೆ. ಇವನ್ನೂ ಕೂಡಲೇ ಪೂರ್ಣಗೊಳಿಸುವುದು ಬಿಎಲ್​ಒ ಹಾಗೂ ಬಿಎಲ್​ಎಗಳ ಜವಾಬ್ದಾರಿಯಾಗಿದೆ.

— ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net