ಎಸ್​ಐಆರ್​ ಎಫೆಕ್ಟ್​ ; ಜನನ ಪ್ರಮಾಣ ಪತ್ರಕ್ಕೆ ಹೆಚ್ಚಿದ ಡಿಮಾಂಡ್​

AI ಚಿತ್ರ
AI ಚಿತ್ರ
Published on
ಉಡುಪಿ: ಜಿಲ್ಲೆಯಲ್ಲಿ ಇತ್ತೀಚೆಗೆ ಎಸ್​ಐಆರ್​ ಪ್ರಕ್ರಿಯೆಗಳು ಆರಂಭಗೊಂಡ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಜನನ ಪ್ರಮಾಣಪತ್ರ ಹಾಗೂ ತಿದ್ದುಪಡಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕಚೇರಿಗಳಿಗೆ ಹರಿದುಬರುತ್ತಿರುವ ಅರ್ಜಿಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿಯಾಗಿದ್ದು, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಈ ಗ್ರಾಫ್​ ಗಣನೀಯವಾಗಿ ಏರಿಕೆಯಾಗುತ್ತಿದೆ.

ಜನನ-ಮರಣ ನೋಂದಣಿ ಹಾಗೂ ತಿದ್ದುಪಡಿ ವಿಭಾಗದಲ್ಲಿ ವರ್ಷದ ಆರಂಭಕ್ಕೆ ಹೋಲಿಸಿದರೆ ಮೇ ಮತ್ತು ಜೂನ್​ ತಿಂಗಳಿನಲ್ಲಿ ದಾಖಲೆ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗಿವೆ.

ದಾಖಲೆ ಸಾಬೀತಿಗೆ ಪ್ರಯತ್ನ
ವಿವಿಧ ಅಧಿಕೃತ ದಾಖಲಾತಿಗಳು, ಶಾಲಾ-ಕಾಲೇಜು ಪ್ರವೇಶಾತಿ ಎಸ್​ಐಆರ್​ ಪ್ರಕ್ರಿಯೆಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯವಾಗುತ್ತಿರುವುದರಿಂದ ಸಾರ್ವಜನಿಕರು ತಮ್ಮ ದಾಖಲೆಗಳನ್ನು ಅಪ್​ಡೇಟ್​ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇದೇ ಕಾರಣಕ್ಕೆ ಸ್ಥಳಿಯ ಆಡಳಿತ ಕಚೇರಿಗಳಲ್ಲಿ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿದೆ.

ಹೆಚ್ಚುತ್ತಿರುವ ತಿದ್ದುಪಡಿ ಅರ್ಜಿಗಳು
ವಿವಿಧ ದಾಖಲೆಗಳು ಮತ್ತು ಮತದಾರರ ಗುರುತಿನ ಚೀಟಿಯಲ್ಲಿ ಹೆಸರು, ಜನ್ಮದಿನಾಂಕ ಒಂದೇ ರೀತಿ ಇರಬೇಕು. ಇದರಲ್ಲಿ ವ್ಯತ್ಯಾಸಗಳಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಹೆಸರು, ಜನ್ಮದಿನಾಂಕ ಅಥವಾ ಪೋಷಕರ ಹೆಸರಿನಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಮಾರ್ಚ್​ ತಿಂಗಳಿನಲ್ಲಿ ಕೇವಲ 327 ಅರ್ಜಿಗಳು ಸ್ವೀಕೃತವಾಗಿದ್ದರೆ, ಜೂನ್​ ವೇಳೆಗೆ ಈ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. ಜನವರಿಯಲ್ಲಿ 371 ಅರ್ಜಿ ಸ್ವೀಕೃತವಾಗಿದ್ದು, 344 ಅರ್ಜಿ ವಿಲೇವಾರಿ ಮಾಡಲಾಗಿದೆ. ಅದೇ ರೀತಿ ಫೆಬ್ರವರಿಯಲ್ಲಿ 392 ಅರ್ಜಿಗಳಲ್ಲಿ 368 ವಿಲೇವಾರಿಯಾಗಿದೆ. ಮಾರ್ಚ್​ನಲ್ಲಿ 327ರಲ್ಲಿ 297 ವಿಲೇವಾರಿ, ಏಪ್ರಿಲ್​ನಲ್ಲಿ 397ರಲ್ಲಿ 371 ವಿಲೇವಾರಿ, ಮೇನಲ್ಲಿ 486ರಲ್ಲಿ 456 ವಿಲೇವಾರಿ, ಜೂನ್​ನಲ್ಲಿ 565 ಅರ್ಜಿಗಳು ಬಂದಿದ್ದು, 537 ಅರ್ಜಿ ವಿಲೇವಾರಿಯಾಗಿದೆ.

ಹೊಸ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೂ ಬೇಡಿಕೆ
ಹೊಸದಾಗಿ ಜನನ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯೂ ಜೂನ್​ ತಿಂಗಳಿನಲ್ಲಿ ಗರಿಷ್ಠ ಮಟ್ಟ ತಲುಪಿದೆ. ಮಾರ್ಚ್​ನಲ್ಲಿ 986 ಇದ್ದ ಅರ್ಜಿಗಳ ಸಂಖ್ಯೆ, ಜೂನ್​ನಲ್ಲಿ 1,471ಕ್ಕೆ ಜಿಗಿದಿದೆ. ಏಪ್ರಿಲ್​ನಲ್ಲಿ 1240 ಅರ್ಜಿಗಳು ಸಲ್ಲಿಕೆಯಾಗಿದ್ದು, 1200 ಅರ್ಜಿ ವಿಲೇವಾರಿಯಾಗಿದೆ. ಮೇನಲ್ಲಿ 1422 ಅರ್ಜಿ ಸ್ವೀಕೃತವಾಗಿದ್ದು, 1385 ವಿಲೇವಾರಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net