ಅಟಲ್ ಪಿಂಚಣಿ ಯೋಜನೆಗೆ ಗಮನಾರ್ಹ ಸ್ಪಂದನೆ

 ಅಟಲ್ ಪಿಂಚಣಿ ಯೋಜನೆ
ಅಟಲ್ ಪಿಂಚಣಿ ಯೋಜನೆ
Published on

ಬೈಂದೂರು: ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಹಾಗೂ ಗೌರವಯುತ ಜೀವನವನ್ನು ಖಾತ್ರಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪಿಂಚಣಿ ಯೋಜನೆ ದೇಶಾದ್ಯಂತ ವ್ಯಾಪಕವಾಗಿ ವಿಸ್ತರಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೂ ಗಮನಾರ್ಹ ಸ್ಪಂದನೆ ದೊರೆತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಅಟಲ್ ಪಿಂಚಣಿ ಯೋಜನೆಯ ಅನುಷ್ಠಾನ, ಫಲಾನುಭವಿಗಳ ಸಂಖ್ಯೆ, ಮಹಿಳೆಯರ ಭಾಗವಹಿಸುವಿಕೆ, ಯೋಜನೆಯ ಆರ್ಥಿಕ ಬಲ ಹಾಗೂ ಕರ್ನಾಟಕ ಮತ್ತು ಜಿಲ್ಲಾವಾರು ಮಾಹಿತಿ ಕೋರಿ ಸಂಸದರು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರ ಯೋಜನೆಯ ವ್ಯಾಪಕ ವಿಸ್ತರಣೆಯನ್ನು ಅಂಕಿ-ಅಂಶಗಳ ಮೂಲಕ ತೋರಿಸಿದೆ.
ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿ, ದುಡಿಯುವ ಅವಧಿಯಲ್ಲಿ ನಿಯಮಿತ ಉಳಿತಾಯ ಪ್ರೋತ್ಸಾಹಿಸುವ ಮೂಲಕ 60 ವರ್ಷಗಳ ನಂತರ ಖಚಿತ ಆದಾಯದ ಭರವಸೆ ನೀಡುವ ಈ ಯೋಜನೆ ಸಾಮಾನ್ಯ ಕುಟುಂಬಗಳ ಭವಿಷ್ಯವನ್ನು ಆರ್ಥಿಕವಾಗಿ ಮತ್ತಷ್ಟು ಭದ್ರಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಕಳೆದ ಒಂದು ದಶಕದಲ್ಲಿ ಯೋಜನೆಗೆ ನಿರಂತರವಾಗಿ ಹೆಚ್ಚುತ್ತಿರುವ ನೋಂದಣಿ, ಯೋಜನೆಯ ಮೇಲಿನ ಜನರ ವಿಶ್ವಾಸ ಹಾಗೂ ಅದರ ವ್ಯಾಪಕ ಸ್ವೀಕಾರವನ್ನು ಪ್ರತಿಬಿಂಬಿಸುತ್ತದೆ ಎಂದರು.

ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೋಂದಣಿ

ಕೇಂದ್ರ ಸರ್ಕಾರದ ಉತ್ತರದ ಪ್ರಕಾರ 2026ರ ಜೂನ್ 30ರ ವೇಳೆಗೆ ದೇಶಾದ್ಯಂತ 9,29,47,723 ಮಂದಿ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಯಾಗಿದ್ದು, ಅವರಲ್ಲಿ 4,56,98,133 ಮಹಿಳೆಯರು ಸೇರಿದ್ದಾರೆ. ಯೋಜನೆಯಡಿ ಸುಮಾರು 57,296 ಕೋಟಿ ನಿಧಿಯನ್ನು ನಿರ್ವಹಿಸಲಾಗುತ್ತಿದ್ದು, ಇದು ಯೋಜನೆಯ ಮೇಲಿನ ಜನರ ವಿಶ್ವಾಸ ಹಾಗೂ ಅದರ ವಿಸ್ತಾರವನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕದಲ್ಲಿ 52,72,744 ಮಂದಿ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಅವರಲ್ಲಿ 25,10,470 ಮಹಿಳೆಯರು ಇದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 1,58,401 ಮಂದಿ ಅಟಲ್ ಪಿಂಚಣಿ ಯೋಜನೆಯಡಿ ಸೇರ್ಪಡೆಯಾಗಿದ್ದು, ಅವರಲ್ಲಿ 79,584 ಮಹಿಳೆಯರು ಇದ್ದಾರೆ. ಇದು ಜಿಲ್ಲೆಯಲ್ಲಿಯೂ ಯೋಜನೆಗೆ ಗಣನೀಯ ಪ್ರಮಾಣದ ನೋಂದಣಿಯಾಗಿರುವುದನ್ನು ತೋರಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net