ನ.9ರಂದು ಶ್ರೀ ಮಹಾಧನ್ವಂತರಿ ಯಾಗದ ಕಚೇರಿ ಉದ್ಘಾಟನೆ

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ ಗೌಡ ಮಾತನಾಡಿದರು. ಸಂತ ರಮಾನಂದ ಗೌಡ, ವಿಜಯ ಕೊಡವೂರು, ಶ್ರೀನಿವಾಸ ಗಾಂಸ್ಕರ್​ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ ಗೌಡ ಮಾತನಾಡಿದರು. ಸಂತ ರಮಾನಂದ ಗೌಡ, ವಿಜಯ ಕೊಡವೂರು, ಶ್ರೀನಿವಾಸ ಗಾಂಸ್ಕರ್​ ಇದ್ದರು.
Published on: 

* ಸಮಿತಿ ಸಂಚಾಲಕ ಗುರುಪ್ರಸಾದ ಗೌಡ ಮಾಹಿತಿ

* ಪೇಜಾವರ ವಿಶ್ವಪ್ರಸನ್ನ ಶ್ರೀಗಳಿಂದ ಚಾಲನೆ

ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ಪ್ರಥಮ ಬಾರಿಗೆ ನ.29ರಂದು 'ಶ್ರೀ ಮಹಾಧನ್ವಂತರಿ ಯಾಗ' ಆಯೋಜಿಸಲಾಗಿದ್ದು, ಪ್ರಚಾರ ಹಾಗೂ ಪೂರ್ವ ಸಿದ್ಧತೆಗಾಗಿ ಉಡುಪಿ ಪೇಜಾವರ ಮಠದ ಹಿಂಭಾಗದಲ್ಲಿ ನೂತನ ಕಾರ್ಯಾಲಯ ತೆರೆಯಲಾಗುತ್ತಿದೆ. ನ.9ರಂದು ಸಂಜೆ 4 ಗಂಟೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕಾರ್ಯಾಲಯ ಉದ್ಘಾಟಿಸಲಿದ್ದಾರೆ ಎಂದು ಆಯೋಜನಾ ಸಮಿತಿ ಸಂಚಾಲಕ ಗುರುಪ್ರಸಾದ ಗೌಡ ಮಾಹಿತಿ ನೀಡಿದರು.

ಉಡುಪಿಯ ಪತ್ರಿಕಾಭವನದಲ್ಲಿ ಶನಿವಾರ (ನ.7) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡು ಯಾಗ ನಡೆಯಲಿದೆ. ಈಗಾಗಲೇ 6 ಸಾವಿರಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಯಾಗದಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯ ಎಂದರು.

ಯಾಗದ ಉದ್ದೇಶ

ಧನ್ವಂತರಿ ದೇವರು ಆಯುರ್ವೇದದ ಅಧಿದೇವತೆ ಎಂದು ಸನಾತನ ಕಾಲದಿಂದಲೂ ನಂಬಿಕೊಂಡು ಬರಲಾಗಿದೆ. ಸಮಾಜದಲ್ಲಿ ಸ್ವಾಸ್ಥ್ಯ ಹದಗೆಟ್ಟಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಲೋಕಕಲ್ಯಾಣಾರ್ಥವಾಗಿ ಹಾಗೂ ಸನಾತನ ನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ ಉಡುಪಿಯಲ್ಲಿ ಈ ಯಾಗ ಮಾಡಲಾಗುತ್ತಿದೆ. ಸನಾತನ ಸಂಸ್ಥೆಯಲ್ಲಿರುವ ಜ್ಯೋತಿರ್ಲಿಂಗದ ಒಂದು ಅಂಶ (ಭಾಗ)ವೂ ಸಹ ಯಾಗದ ದಿನ ಉಡುಪಿಗೆ ಆಗಮಿಸಲಿದೆ. ತಮಿಳುನಾಡಿನ ಪ್ರಸಿದ್ಧ ಪುರೋಹಿತರ ತಂಡ ಯಾಗವನ್ನು ನೆರವೇರಿಸಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ರಮಾನಂದ ಗೌಡ, ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ಸಮಿತಿ ಸದಸ್ಯ ಶ್ರೀನಿವಾಸ ಗಾಂಸ್ಕರ್​ ಇದ್ದರು.