ಬಾರಕೂರಲ್ಲಿ ಶೌಚಗೃಹ ಕೊರತೆ!

ಒಡೆದ ಟೈಲ್ಸ್, ಕುಸಿದ ಬೇಸಿನ್
ಬಾರಕೂರಿನ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಗೃಹ ಶೋಚನೀಯ ಸ್ಥಿತಿಗೆ ತಲುಪಿರುವುದು.
ಬಾರಕೂರಿನ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಗೃಹ ಶೋಚನೀಯ ಸ್ಥಿತಿಗೆ ತಲುಪಿರುವುದು.
Published on: 

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

365 ದೇವಾಲಯಗಳ ನಗರ ತುಳುನಾಡ ರಾಜಧಾನಿ ಬಾರಕೂರಿನ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ಶೌಚಗೃಹ ಶೋಚನೀಯ ಸ್ಥಿತಿಗೆ ತಲುಪಿದೆ. ಇದರಿಂದ ದೂರದ ಊರಿಂದ ಬರುವ ಪ್ರಯಾಣಿಕರು, ಪ್ರವಾಸಿಗರು ಮತ್ತು ಸ್ಥಳೀಯ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ.

ಉಡುಪಿ ತಾಲೂಕು ಪಂಚಾಯಿತಿ ಸದಸ್ಯ ದಿ.ಬಾರಕೂರು ಸತೀಶ್ ಪೂಜಾರಿ ನಿರಂತರ ಹೋರಾಟದ ಲವಾಗಿ ಈ ಶೌಚಗೃಹ ರಚನೆಗೊಂಡಿತ್ತು. ಉದ್ಘಾಟನೆಗೊಂಡ ಕೆಲವು ಸಮಯ ಮಾತ್ರ ಸುಸ್ಥಿತಿಯಲ್ಲಿದ್ದು, ನೀರು ಸರಬರಾಜು ಕೂಡಾ ಇದ್ದು, ಸಾರ್ವಜನಿಕರ ಇದನ್ನು ಬಳಸುತ್ತಿದ್ದರು.

ಕೆಲವು ಕಾಲದ ಬಳಿಕ ಸರಿಯಾದ ನಿರ್ವಹಣೆ ಇಲ್ಲದೆ ಶೋಚನೀಯ ಸ್ಥಿತಿಗೆ ತಲುಪಿದ್ದು, ಬಳಿಕ ಸಾರ್ವಜನಿಕರು ಇದನ್ನು ಬಳಸುವುದನ್ನೇ ಬಿಟ್ಟಿದ್ದಾರೆ. ‘ಶೌಚಗೃಹ’ ನಾಮಫಲಕ ಕಂಡು ಒಳಗಡೆ ಹೋದರೆ ನೀರು ಬರದಿರುವ ಟ್ಯಾಪ್, ಒಡೆದ ಟೈಲ್ಸ್, ಕುಸಿದಿರುವ ಬೇಸಿನ್ ಗೋಚರಿಸುತ್ತದೆ. ವಾಸನೆಯಿಂದ ಮೂಗು ಮುಚ್ಚಿಕೊಂಡು ಹಿಂದಿರುಗುವ ಸ್ಥಿತಿಯಲ್ಲಿದೆ.

ಬಯಲು ಶೌಚ ಮುಕ್ತವಾಗಿ ದೇಶದ ಎಲ್ಲ ಮನೆಗಳು, ಗ್ರಾಮಗಳು ಶೌಚಗೃಹಗಳನ್ನು ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಅಭಿಯಾನ ಮಾಡಿದ್ದರೂ ಬುದ್ಧಿವಂತರ ಜಿಲ್ಲೆ, ಸಾಕ್ಷರ ಜಿಲ್ಲೆ ಎನಿಸಿದ ಉಡುಪಿ ಜಿಲ್ಲೆಯ ಪಾರಂಪರಿಕ ನಗರದಲ್ಲಿ ಸುಸಜ್ಜಿತ ಶೌಚಗೃಹದ ಕೊರತೆ ಏರ್ಪಟ್ಟಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ.

ಬಳಸಲು ಹಿಂದೇಟು!

ಹಲವಾರು ಪುರಾತನ ಶಿಲಾ ದೇವಸ್ಥಾನ, ನೂತನವಾಗಿ ನಿರ್ವಾಣಗೊಂಡ ಹಲವಾರು ದೇವಸ್ಥಾನ, ಜೈನ ಬಸದಿ, ಕೋಟೆಯ ಅವಶೇಷಗಳನ್ನು ನೋಡಲು ಬರುವ ಪ್ರವಾಸಿಗರು, ದೂರದ ಊರಿನಿಂದ ಬಸ್‌ನಲ್ಲಿ ಬಂದ ಮಹಿಳಾ ಪ್ರಯಾಣಿಕರು ಬಸ್ ನಿಲ್ದಾಣದ ಬಳಿ ಇರುವ ಶೌಚಗೃಹವನ್ನು ಬಳಸಲು ಹಿಂದೇಟು ಹಾಕುವಂತಾಗಿದೆ. ಈ ಪರಿಸರದಲ್ಲಿ ಹೊಸದಾಗಿ ನಿರ್ವಾಣಗೊಂಡ ಕೆಲವು ಹೋಟೆಲಿನಲ್ಲಿಯೂ ಶೌಚಗೃಹ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಪ್ರವಾಸಿಗರಿಂದ ದೂರುಗಳು ಕೇಳಿಬಂದಿವೆ.

ಬಾರಕೂರಿನಲ್ಲಿ ಸಮರ್ಪಕವಾಗಿ ಸಾರ್ವಜನಿಕ ಶೌಚಗೃಹ ನಿರ್ವಹಣೆ ಮಾಡುವಂತೆ ಸಾರ್ವಜನಿಕರಿಂದ ಅನೇಕ ಮನವಿಗಳು ಬಂದಿವೆ. ರಸ್ತೆ ವಿಸ್ತರಣೆ ಕಾಮಗಾರಿ ಆಗುವ ಸಿದ್ಧತೆಯಲ್ಲಿರುವುದರಿಂದ ಸರಿಯಾದ ಸ್ಥಳ ಗುರುತಿಸಿ ಗ್ರಾಮ ಪಂಚಾಯಿತಿ ವತಿಯಿಂದ ಹೊಸದಾಗಿ ಶೌಚಗೃಹ ನಿರ್ಮಿಸಲಾಗುವುದು.
ಮಹೇಶ್ ಬಾರಕೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ತುಳುನಾಡಿನ ರಾಜಧಾನಿ ಬಾರಕೂರು ಗತಕಾಲದ ಐತಿಹಾಸಿಕ ನಗರವಾಗಿ ಇಂದಿಗೂ ಹಲವಾರು ಜಾತಿ ಜನಾಂಗದವರ ಮೂಲಸ್ಥಳವಾಗಿ ಗುರುತಿಸಿಕೊಂಡಿದೆ. ದೇವಸ್ಥಾನಗಳು, ದೈವಸ್ಥಾನಗಳ ಊರಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕಾಗಿದೆ. ಇದರಿಂದಾಗಿ ದೂರದ ಊರುಗಳಿಂದ ಆಗಮಿಸಿದ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಶಾರದಾ ನಾಯ್ಕ ಉಳ್ಳೂರು ಸಾಮಾಜಿಕ ಕಾರ್ಯಕರ್ತೆ