ಮೂಡುಬಿದಿರೆ: ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು, ಸಿಬ್ಬಂದಿ ಕೊರತೆಯಿಂದ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಸುತ್ತಮುತ್ತಲಿನ 12 ಗ್ರಾಮಗಳ ಜನರು ಜ್ವರ, ಬಿಪಿ, ಶುಗರ್, ಗರ್ಭಿಣಿಯರ ತಪಾಸಣೆ, ತುರ್ತು ಚಿಕಿತ್ಸೆಗೆ ಈ ಕೇಂದ್ರವನ್ನು ಅವಲಂಬಿಸಿದ್ದು, ವೈದ್ಯರ ಕೊರತೆಯಿಂದ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳುವ ಅನಿವಾರ್ಯತೆ ಎದುರಾಗಿದೆ.
ಪ್ರಸ್ತುತ ಬೆಳುವಾಯಿ ವೈದ್ಯ ಡಾ.ಭರತ್‌ಗೆ ಈ ಆಸ್ಪತ್ರೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು, ವಾರದಲ್ಲಿ ಒಂದು ದಿನ ಮಾತ್ರ ಸೇವೆ ಲಭ್ಯವಾಗುತ್ತಿದೆ ಎನ್ನಲಾಗಿದೆ. ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಭೇಟಿ ನೀಡುತ್ತಿದ್ದರೂ ಮಧ್ಯಾಹ್ನದ ಬಳಿಕ ಸೇವೆ ಸೀಮಿತವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
24x7 ಸೇವೆ, ಕಾಯಂ ವೈದ್ಯರ ನೇಮಕಕ್ಕೆ ಹೋರಾಟಗಾರ ಸುದತ್ತ ಜೈನ್ ಶಿರ್ತಾಡಿ ಈ ಹಿಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಸಾರ್ವಜನಿಕರು, ಆಟೋ ಚಾಲಕರು ಇತ್ತೀಚೆಗೆ ಕೇಂದ್ರಕ್ಕೆ ಭೇಟಿ ನೀಡಿದ ಕುಟುಂಬ ಯೋಜನಾ ಅಧಿಕಾರಿ ದೀಪ ಅವರ ಗಮನಕ್ಕೆ ಸಮಸ್ಯೆಯನ್ನು ತಂದಿದ್ದಾರೆ. ಸಿಬ್ಬಂದಿ ಕೊರತೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ದೀಪ ತಿಳಿಸಿದ್ದಾರೆ. ವೈದ್ಯರ ನೇಮಕಾತಿಗೆ ಈಗಾಗಲೇ ಸಂದರ್ಶನ ನಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.