ಕುಂದಾಪುರದ ಚರ್ಚ್ ರಸ್ತೆಯಲ್ಲಿನ ಹೋಲಿ ರೋಸರಿ ಚರ್ಚ್ ಎದುರು ಶುಕ್ರವಾರ ಬೆಳಗಿನ ಜಾವ 3.30ರ ಸುಮಾರಿಗೆ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬಾರ್ಕೂರು ಕಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್(45) ಕೊಲೆಯಾದವರು. ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದ ಐವನ್ ತಮ್ಮ ಮೊದಲ ಪತ್ನಿ ಸೆಲ್ಮಾ ಮಸ್ಕರೆನ್ಸ್ ಅವರನ್ನು ತೊರೆದು ಬಾರ್ಕೂರು ಮೂಲದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಮುಂಜಾನೆ ಮಹಿಳೆಯೊಂದಿಗೆ ಕಾರಿನಲ್ಲಿ ಬಂದಿದ್ದಾಗ ಕುಂದಾಪುರ ಚರ್ಚ್ ಎದುರಲ್ಲಿ ಈ ಘಟನೆ ನಡೆದಿದೆ. ಪಿಸ್ತೂಲ್ ಮೂಲಕ ಆರೋಪಿ ಡೆರಿಕ್ ಗುಂಡು ಹೊಡೆದು ಪರಾರಿಯಾಗಿದ್ದು, ತೀವ್ರ ರಕ್ತಸ್ರಾವದಿಂದ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ವಿವರ
ಗುರುವಾರ ರಾತ್ರಿ 11.45 ಗಂಟೆಗೆ ಡೆರಿಕ್ ಎಂಬುವರು ಐವನ್ ಅವರಿಗೆ ಕರೆ ಮಾಡಿ ಚಟ್ಲಿ ಕೊಡುವ ವಿಚಾರದಲ್ಲಿ ಹಣ ಬರಲು ಬಾಕಿ ಇದ್ದು, ಈ ವಿಚಾರದಲ್ಲಿ ಡೆರಿಕ್ ಮಧ್ಯಸ್ಥಿಕೆ ವಹಿಸಿ ಹಣ ತೆಗಿಸಿಕೊಡುತ್ತೇನೆ ಎಂದು ಹೇಳಿರುವ ವಿಚಾರದಲ್ಲಿ ಜೋರು ಜೋರಾಗಿ ಮಾತನಾಡುತ್ತ ಗಲಾಟೆ ಮಾಡಿಕೊಳ್ಳುತ್ತಿದ್ದರು. ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ ಎಂದು ಡೆರಿಕ್ ಐವನ್‌ಗೆ ಹೇಳಿ ಶುಕ್ರವಾರ ರಾತ್ರಿ 1.30ಕ್ಕೆ ಲೋಕೆಶನ್ ಕಳುಹಿಸಿದ್ದರು. ಅದರಂತೆ ಐವನ್ ಲೊಕೇಶನ್ ಆಧರಿಸಿ ಕಾರಿನಲ್ಲಿ ಬಂದಿದ್ದು, ಕುಂದಾಪುರ ಚರ್ಚ್ ರಸ್ತೆಯ ಹೋಲಿ ರೋಸಾರಿಯ ಚರ್ಚ್ ಎದುರಿನ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದಾಗ, ಸುಮಾರು 3.15ಕ್ಕೆ ಕಪ್ಪು ಕೆಂಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಡೆರಿಕ್ ಐವನ್ ಇದ್ದ ಕಾರಿನ ಎದುರು ನಿಲ್ಲಿಸಿ ಕೆಳಗೆ ಇಳಿದು ಬಂದಿದ್ದಾನೆ.
ಐವನ್ ಕಾರಿನಿಂದ ಇಳಿದಾಗ, ಡೆರಿಕ್ ಗನ್‌ನಿಂದ ಸೊಂಟದ ಕೆಳ ಭಾಗಕ್ಕೆ ಶೂಟ್ ಮಾಡಿ ವಾಪಸ್ ಕಾರನ್ನು ಹತ್ತಿ ಹಿಮ್ಮುಖವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಾಯಗೊಂಡು ರಕ್ತಸ್ರಾವವಾಗಿ ರಸ್ತೆಯಲ್ಲೇ ಕುಸಿದು ಬಿದ್ದ ಐವನ್, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಐವನ್ ಹಾಗೂ ಡೆರಿಕ್ ಅವರಿಗೆ ಇದ್ದ ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರದ ವಿಚಾರದಲ್ಲಿ ಉಂಟಾಗಿರುವ ಮನಸ್ತಾಪ ಕೊಲೆಗೆ ಕಾರಣ ಎನ್ನಲಾಗಿದೆ.
ಉಡುಪಿ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್‌ಸ್ಪೆಕ್ಟರ್ ಜಯರಾಮ ಗೌಡ, ಪಿಎಸ್‌ಐಗಳಾದ ನಂಜಾ ನಾಯ್ಕ, ಪುಷ್ಪಾ, ಅನೂಪ್ ನಾಯಕ್ ಮೊದಲಾದವರು ಭೇಟಿ ನೀಡಿದ್ದಾರೆ.
ತಲೆಮರೆಸಿಕೊಂಡಿರುವ ಶೂಟೌಟ್ ಪ್ರಕರಣದ ಆರೋಪಿ ಡೆರಿಕ್ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯನ್ನು ಶೀಘ್ರ ಪತ್ತೆ ಮಾಡಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.