ವೇದ ರಕ್ಷಣೆ-ಪೋಷಣೆಗೆ ಆದ್ಯತೆ: ಶೀರೂರು ಶ್ರೀ

ಶೀರೂರು ಮಠದ ಪರ್ಯಾಯೋತ್ಸವ ಅಂಗವಾಗಿ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್​
ಶೀರೂರು ಮಠದ ಪರ್ಯಾಯೋತ್ಸವ ಅಂಗವಾಗಿ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್​
Published on
ಉಡುಪಿ:​ ಪ್ರಾಣದೇವರಿಂದ ಪ್ರತಿಷ್ಠಿತ ಹಾಗೂ ರುಕ್ಮಿಣಿ ದೇವಿ ಕರಾರ್ಚಿತ ಕೃಷ್ಣನ ಪೂಜೆಯಿಂದ ಯಾಗ ಮಾಡಿದ ಲ ಪ್ರಾಪ್ತೊಯಾಗುತ್ತದೆ. ಕೃಷ್ಣ ಸಂದೇಶ ಜನಮಾನಸಕ್ಕೆ ತಲುಪಿಸುವುದು, ವೇದಗಳ ರಕ್ಷಣೆ ಮತ್ತು ವೇದ ಪಂಡಿತರ ಪೋಷಣೆ, ತನ್ಮೂಲಕ ಕೃಷ್ಣನ ಆರಾಧನೆ ಪರ್ಯಾಯದ ಮುಖ್ಯ ಗುರಿಯಾಗಿದೆ ಎಂದು ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದರು.

ಶೀರೂರು ಮಠದ ಪರ್ಯಾಯೋತ್ಸವ ಅಂಗವಾಗಿ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್​ನಲ್ಲಿ ಅವರು ಸಂದೇಶ ನೀಡಿದರು. ಜನರ ಸೇವೆ ಮತ್ತು ಜನಾರ್ದನ ಸೇವೆ ಆಚಾರ್ಯರು ತೋರಿಸಿಕೊಟ್ಟ ಮಾರ್ಗ. ಎಲ್ಲರೊಳಗೂ ಭಗವಂತನಿದ್ದಾನೆ ಎಂಬುದಾಗಿ ಭಾವಿಸಿ ಮನುಷ್ಯರು ಮತ್ತು ಪ್ರಾಣಿಗಳನ್ನು ಪ್ರೀತಿಸಬೇಕು. ಇದರಿಂದ ಪರಮಾತ್ಮನ ಅನುಗ್ರಹವಾಗುತ್ತದೆ ಎಂದರು.

ರಜಾ ಅವಧಿಯನ್ನು ಬೇರೆ ಎಲ್ಲೂ ಕಳೆಯುವ ಬದಲು ಕೃಷ್ಣ ಮಠದಲ್ಲಿ ಕೃಷ್ಣನ ಸೇವೆ ಮಾಡಲು ಬರಬಹುದು. ದೇವರ ಭಯವಿದ್ದರೆ ಮನುಷ್ಯ ಧರ್ಮ ಮಾರ್ಗದಲ್ಲಿ ಸಾಗಲು ಸಾಧ್ಯ. ಇದರಿಂದ ಲೋಕಕ್ಕೂ ಹಿತವಾಗುತ್ತದೆ ಎಂದು ಹೇಳಿದರು.

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿ, ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹೊಣೆಗಾರಿಕೆ ಶೀರೂರು ಶ್ರೀಗಳ ಹೆಗಲೇರಿದೆ. ದೇವರ ಪ್ರಜ್ಞೆಯನ್ನು ಜನರಲ್ಲಿ ಬೆಳೆಸಬೇಕು. ಧರ್ಮವನ್ನು ಬೋಧಿಸುವುದು ಮಾತ್ರವಲ್ಲದೆ ಅದನ್ನು ನಿಜ ಜೀವನದಲ್ಲೂ ಅನುಷ್ಠಾನ ಮಾಡಬೇಕು. ಕೇವಲ ಪ್ರಚಾರದಲ್ಲಿ ಧರ್ಮ ಜಾಗರಣ ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಆತ್ಮೋದ್ಧಾರವನ್ನು ಮಾಡಿಕೊಳ್ಳಬೇಕು ಎಂದರು.

ಪಲಿಮಾರು ಮಠದ ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ, ಅನೇಕ ಧರ್ಮಗ್ರಂಥಗಳು ದೇವ ದೂತರು ಉಪದೇಶ ಕೃತಿಯಾಗಿದೆ. ಆದರೆ ಹಿಂದುಗಳಲ್ಲಿ ಸ್ವತ ದೇವರೇ ಧರ್ಮಗ್ರಂಥಗಳನ್ನು ನೀಡಿದ್ದು, ನಾವೆಲ್ಲಾ ಸೌಭಾಗ್ಯವಂತರು. ವಾಮನ ತೀರ್ಥ ಪರಂಪರೆಯ ವೇದವರ್ಧನ ತೀರ್ಥರು ತ್ರಿವಿಕ್ರಮ ರೂಪದಲ್ಲಿ ಬೆಳೆಯಲಿ ಎಂದು ಆಶಿಸಿದರು.

ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ಜ್ಞಾನಕ್ಕೆ ಪ್ರತಿಬಂಧಕ ನಿವಾರಣೆಗಾಗಿ ಆಚಾರ್ಯರು ಕೃಷ್ಣನನ್ನು ಪ್ರತಿಷ್ಠೆ ಮಾಡಿದರು. ಮಸ್ತಕಕ್ಕೆ ಹಾಗೂ ಉದರಕ್ಕೆ ಎರಡಕ್ಕೂ ಅನ್ನ ನೀಡುವ ಕ್ಷೇತ್ರವಾಗಿ ಬೆಳೆದಿದೆ. ಅನೇಕ ಸವಾಲುಗಳನ್ನು ಎದುರಿಸಿ ವೇದವರ್ಧನ ತೀರ್ಥರನ್ನು ಸಮಾಜಕ್ಕೆ ನೀಡಿದ ಸೋದೆ ಶ್ರೀಗಳು ಅಭಿನಂದನಾರ್ಹರು ಎಂದು ಹೇಳಿದರು.

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಧಮಾರ್ಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಮೈಸೂರು ಸಂಸ್ಥಾನದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ, ಕಿರಣ್​ ಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳಿ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಇಸ್ಕಾನ್​ ಅಧ್ಯಕ್ಷ ಮಧು ಪಂಡಿತ್​ ದಾಸ್​, ಉಪಾಧ್ಯಕ್ಷ ಚಂಚಲಪತಿ ದಾಸ್​, ಉದ್ಯಮಿ ವಿಷ್ಣುಶರಣ್​ ಭಟ್​, ಕರ್ನಾಟಕ ಬ್ಯಾಂಕ್​ ಎಂ.ಡಿ. ರಾಘವೇಂದ್ರ ಎಸ್​. ಭಟ್​, ಕೆನರಾ ಬ್ಯಾಂಕ್​ ಕಾರ್ಯಕಾರಿ ನಿರ್ದೇಶಕ ಭುವನೇಂದ್ರ ಕುಮಾರ್​, ಜಿಎಂ ಗಂಗಾಧರ್​, ಅದಾನಿ ಗ್ರೂಪ್​ ನಿರ್ದೇಶಕ ಕಿಶೋರ್​ ಆಳ್ವಾ, ಬ್ರಾಹ್ಮಣ ಸಂದ ಶ್ರೀಕಾಂತ್​ ಉಪಾಧ್ಯಾಯ, ಎಲ್​ಐಸಿ ಎಸ್​ಡಿಎಂ ಗಣಪತಿ ಭಟ್​, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು. ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಶಾಸಕ ಯಶ್​ ಪಾಲ್​ ಸುವರ್ಣ ಸ್ವಾಗತಿಸಿ, ವಿದ್ವಾನ್​ ಅಮೃತೇಶ್​ ಭಟ್​ ಕಾರ್ಯಕ್ರಮ ನಿರೂಪಿಸಿದರು.
"

ಸಾಧಕರ ಜೀವನೋದ್ಧಾರಕ್ಕಾಗಿ ಆಚಾರ್ಯ ಮಧ್ವರು ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಪ್ರಾಮಾಣಿಕತೆಯ ಜೀವನ ನಡೆಸಿದಾಗ ಮಾತ್ರ ಜನರಿಗೆ ವಿಶ್ವಾಸ ಹುಟ್ಟುತ್ತದೆ. ಆದರೆ ಇತ್ತೀಚೆಗೆ ಅಪ್ರಾಮಾಣಿಕತೆ, ಅನೈತಿಕತೆಗೆ ಆದರ , ವಿಶ್ವಾಸ ತೋರಿಸುವ ಪ್ರವೃತ್ತಿ ಬೆಳೆಯುತ್ತಿರುವುದು ಕಳವಳಕಾರಿ ಸಂಗತಿ. ಶೀರೂರು ಮಠ ಪ್ರವರ್ಧನಮಾನಕ್ಕೆ ಬರಬೇಕು ಎಂಬ ಉದ್ದೇಶದಿಂದ ಅವರಿಗೆ ವೇದವರ್ಧನ ಎಂಬುದಾಗಿ ನಾಮಕರಣ ಮಾಡಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net