ಉಡುಪಿ : ಶೀಂಬ್ರ ಶ್ರೀಸಿದ್ಧಿವಿನಾಯಕ ದೇವಳದ ಸ್ನಾನಘಟ್ಟದಲ್ಲಿ ಸ್ನಾನ ಮಾಡಿದರೆ ಸುವರ್ಣ ಸಿದ್ಧಿ ಪ್ರಾಪ್ತವಾಗುತ್ತದೆ. ವಾದಿರಾಜರು ತೀರ್ಥ ಪ್ರಬಂಧದಲ್ಲಿ ತಿಳಿಸಿದಂತೆ ಮನುಷ್ಯನ ಪಾಪವನ್ನು ಸುಟ್ಟು ಭಸ್ಮ ಮಾಡುವ ಶಕ್ತಿ ಸ್ವರ್ಣ ನದಿಗಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಸೋದೆ ಶ್ರೀವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟಿರುವ ಶೀಂಬ್ರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಸುವರ್ಣಾ ನದಿ ಸ್ನಾನಘಟ್ಟದಲ್ಲಿ ಸ್ಥಾಪಿಸಿರುವ ನೂತನ ಸೋಪಾನವನ್ನು ಮಂಗಳವಾರ ಕೃಷ್ಣಾಂಗಾರ ಚತುರ್ದಶಿಯ ಪರ್ವಕಾಲದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಪವಿತ್ರ ಸ್ಥಳದ ಪಾವಿತ್ರತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ನದಿಯ ಶುಚಿತ್ವಕ್ಕೆ ತೊಂದರೆ ಮಾಡುವ ಕೆಲಸವನ್ನು ಭಕ್ತರು ಮಾಡಬಾರದು ಎಂದರು.
ಸೋದೆ ಶ್ರೀವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಸಿವಿಲ್ ಎಂಜಿನಿಯರ್ ರಮೇಶ್ ರಾವ್, ನೆರಿಯ ಹರೀಶ್ ಹೆಬ್ಬಾರ್, ಮಣಿಪಾಲ ಸಂಸ್ಥೆಯ ವಸಂತಿ ರಾಮದಾಸ್ ಪೈ , ಸಂಧ್ಯಾ ಪೈ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು. ಅಮಿತಾ ಕಾರ್ಯಕ್ರಮ ನಿರೂಪಿಸಿದರು.
ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ಮಹಿಳಾ ಭಜನಾ ಮಂಡಳಿ ಸದಸ್ಯೆಯರಿಂದ ಭಜನೆ ನಡೆಯಿತು.