ಕುಕ್ಕೆ ಸ್ನಾನಘಟ್ಟಕ್ಕೆ ಕೊಳಚೆ ನೀರು

 ಕಡಬ ತಾಪಂ ಸಭಾಂಗಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ, ಗಣೇಶ್, ಶಾಯದುಲ್ಲಾ ಖಾನ್ ಉಪಸ್ಥಿತರಿದ್ದರು.
ಕಡಬ ತಾಪಂ ಸಭಾಂಗಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ, ಗಣೇಶ್, ಶಾಯದುಲ್ಲಾ ಖಾನ್ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಡಬ
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ಅಶುಚಿತ್ವ ತಾಂಡವವಾಡುತ್ತಿರುವ ಬಗ್ಗೆ 6 ವರ್ಷಗಳಿಂದ ಬೊಬ್ಬೆ ಹೊಡೆಯುತ್ತಿದ್ದೇವೆ. ಇಲ್ಲಿ ಒಳಚರಂಡಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಲಕ್ಷಾಂತರ ಭಕ್ತರು ಇಲ್ಲಿ ಸ್ನಾನ ಮಾಡುತ್ತಾರೆ. ಅವರು ಅನಾರೋಗ್ಯಕ್ಕೆ ತುತ್ತಾದರೆ ಹೊಣೆ ಯಾರು?. ಕೊಳಚೆ ನೀರು ಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಡಿಪಿ ಸದಸ್ಯ ಶಿವರಾಮ ರೈ ಆಗ್ರಹಿಸಿದರು.
ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಿವರಾಮ ರೈ ವಿಷಯ ಪ್ರಸ್ತಾಪಿಸಿದರು. ದೇವಳದ ವತಿಯಿಂದ ಸ್ವಚ್ಛತಾ ಕೆಲಸ ನಡೆಯುತ್ತಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದರು. ಆಗ ಮತ್ತೆ ಧ್ವನಿ ಎತ್ತಿದ ಶಿವರಾಮ ರೈ, ವಸತಿಗೃಹಗಳ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ರೀತಿಯ ಅಸಡ್ಡೆ ಯಾಕೆಂದು ಪ್ರಶ್ನಿಸಿದರು. ಚರ್ಚೆಗೆ ತೆರೆ ಎಳೆದ ಶಾಸಕಿ ಮುರುಳ್ಯ, ಈ ವಾರದಲ್ಲಿ ಸ್ಥಳ ವೀಕ್ಷಣೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಡಬ ಪೇಟೆಗೆ ಹತ್ತಿರವಾಗಿರುವ 2.80 ಎಕರೆ ಜಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗಬೇಕೆನ್ನುವುದು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದರೆ ಈಗ 2 ಕಿ.ಮೀ. ದೂರದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಮುಂದಾಗುವುದು ಸರಿಯಲ್ಲ ಎಂದು ಕೆಡಿಪಿ ಸದಸ್ಯ ಅಶ್ರಫ್ ಶೇಡಿಗುಂಡಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಮುರುಳ್ಯ, ಕಡಬದ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಮುಂದಿನ ವರ್ಷಗಳಲ್ಲಿ ಕಡಬ ನಗರ ವಿಶಾಲವಾಗಿ ಬೆಳೆಯುವುದರಿಂದ ಸ್ವಲ್ಪ ದೂರದಲ್ಲಿ ಬಸ್ ನಿಲ್ದಾಣ ಇದ್ದರೆ ಅನುಕೂಲವಾಗುತ್ತದೆ ಎಂದರು.

ಸ್ಥಳ ಕೊರತೆ

ಏಕಕಾಲದಲ್ಲಿ ಎರಡು ಬಸ್‌ಗಳ ಸಂಚಾರಕ್ಕೆ ಸ್ಥಳಾವಕಾಶದ ಕೊರತೆ ಎದುರಾಗುತ್ತದೆಂದು ಕೆಎಸ್ಸಾರ್ಟಿಸಿಯವರು ಹೇಳಿದ ಮೇರೆಗೆ ಸ್ಥಳ ಬದಲಾವಣೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಉಪತಹಸೀಲ್ದಾರ್ ಶಾಯದುಲ್ಲಾ ಖಾನ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶ್ರಫ್ ಶೇಡಿಗುಂಡಿ, ಸ್ಥಳ ಬೇಡ ಎಂದು ಹೇಗೆ ಹೇಳುತ್ತಾರೆ. 5 ಕೆಡಿಪಿ ಸಭೆಯಲ್ಲಿ ಈ ಬಗ್ಗೆಯೇ ಚರ್ಚೆಯಾಗುತ್ತಿದೆ. ಆದರೆ ಯಾವುದೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, ಈಗ ಗುರುತಿಸಲಾದ 3 ಸ್ಥಳಗಳ್ನು ಶಾಸಕಿಯ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅಂತಿಮ ತೀರ್ಮಾನ ಮಾಡುವುದು ಒಳಿತು ಎಂದರು. ಇದಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಸಮ್ಮತಿಸಿದರು.
ಕೆಡಿಪಿ ಸದಸ್ಯರಾದ ಗಿರೀಶ್, ಉಷಾ, ಪದ್ಮನಾಭ ಗೌಡ, ಮೋನಪ್ಪ ವಳಕಡಮ, ತಹಸೀಲ್ದಾರ್ ಗಣೇಶ್ ಸವನೂರ ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ವಂದಿಸಿದರು.

ಕಡತಕ್ಕೆ ಸಿಗದ ಸ್ಪಂದನೆ

ಸುಬ್ರಹ್ಮಣ್ಯದ ದೇವರಗದ್ದೆಯಲ್ಲಿ ಕಾಲು ದಾರಿಗೆ ಸಂಬಂಧಿಸಿ ಭೂಸ್ವಾಧೀನದ ಕಡತಕ್ಕೆ 7 ವರ್ಷವಾದರೂ ಸ್ಪಂದನೆ ಇಲ್ಲ. ಸರ್ವೇ ಇಲಾಖೆಯಲ್ಲಿ ಇರುವಷ್ಟು ಭ್ರಷ್ಟಾಚಾರ ಬೇರೆ ಯಾವುದೇ ಇಲಾಖೆಯಲ್ಲಿಲ್ಲ. ಯಾವ ಕಡತಗಳೂ ಮುಂದೆ ಹೋಗುವುದಿಲ್ಲ. 2019ರಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆಗೆ ಈ ತನಕ ನ್ಯಾಯ ಸಿಕ್ಕಿಲ್ಲ ಎಂದು ಶಿವರಾಮ ರೈ ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net