ಉಪ್ಪಿನಂಗಡಿ: ಜಿಲ್ಲೆಯ ಜೀವನದಿ ನೇತ್ರಾವತಿಯಲ್ಲಿ ಈ ಬಾರಿ ಮುಂಗಾರು ಮಳೆಯ ನೀರು ಹರಿಯದಿದ್ದರೂ ವಸತಿ ಸಮುಚ್ಚಯಗಳ ಶೌಚಾಲಯದ ತ್ಯಾಜ್ಯ ಸೇರಿದಂತೆ ಮಲೀನ ನೀರು ಹರಿಯುತ್ತಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ನದಿಯ ಒಡಲಿನಲ್ಲಿ ವಸತಿ ಸಮುಚ್ಚಯದಿಂದ ಹರಿದು ಬಂದು ಸಂಗ್ರಹವಾಗಿರುವ ಮಲೀನ ನೀರು ಹರಿಯುವ ನದಿಯನ್ನು ಸೇರುತ್ತಿರುವ ದೃಶ್ಯವನ್ನು ಸೆರೆ ಹಿಡಿದಿರುವ ಉಪ್ಪಿನಂಗಡಿ ನೆಲಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೈಲಾರ್ ರಾಜಗೋಪಾಲ ಭಟ್ ಜಿಲ್ಲೆಯ ಜೀವನದಿಯನ್ನು ಈ ಪ್ರಮಾಣದಲ್ಲಿ ಮಲಿನ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ವಸತಿ ಸಮುಚ್ಚಯದ ನಿವಾಸಿಯೊಬ್ಬರು ಪ್ರತಿಕ್ರಿಯಿಸಿ, ಶೌಚಾಲಯದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಅವಕಾಶವಿದ್ದರೂ ಅದನ್ನು ಮಾಡದೆ ರಾತ್ರಿ ಹೊತ್ತು ನೇರವಾಗಿ ನದಿಗೆ ಬಿಡುವುದರಿಂದ ಪರಿಸರವಿಡೀ ದುರ್ನಾತ ಬೀರುತ್ತಿದೆ. ಆಡಳಿತ ವ್ಯವಸ್ಥೆಯೂ ಮೌನವಾಗಿದೆ.
ನದಿಗೆ ಶೌಚಾಲಯದ ತ್ಯಾಜ್ಯ ಬಿಡುತ್ತಿರುವ, ರಾತ್ರಿ ಹೊತ್ತು ನದಿ ಪಾತ್ರದುದ್ದಕ್ಕೂ ಸಹಿಸಲಸಾಧ್ಯವಾದ ದುರ್ವಾಸನೆ ಹರಡುತ್ತಿರುವ ಬಗ್ಗೆ ಶಾಸಕರಲ್ಲಿ ದೂರಿಕೊಂಡಾಗ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಅದ್ಯಾವುದೂ ಪಾಲನೆಯಾಗುತ್ತಿಲ್ಲ.