ಅಂಬೇಡ್ಕರ್ ಪ್ರತಿಮೆ ಬೇಡಿಕೆಗೆ ಹಿನ್ನಡೆ

 ಕುಂದಾಪುರ ಪಾರಿಜಾತ ವೃತ್ತ
ಕುಂದಾಪುರ ಪಾರಿಜಾತ ವೃತ್ತ
Published on
 ವಿಜಯವಾಣಿ ಸುದ್ದಿಜಾಲ ಕುಂದಾಪುರ
ಪಾರಿಜಾತ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವ ಪುರಸಭೆಯ ಬೇಡಿಕೆಗೆ ಭಾರಿ ಹಿನ್ನಡೆಯಾಗಿದೆ. ಪುರಸಭೆ ನಿಯೋಗ ಈ ವಿಚಾರದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ನಿರ್ದೇಶನ ಮತ್ತು ಸರ್ಕಾರದ ಪೌರಾಡಳಿತ ಇಲಾಖೆ ಆದೇಶದಂತೆ ಮಹಾನ್ ನಾಯಕರ ಪ್ರತಿಮೆ ರಚಿಸಲು ಅನುಮತಿಯಿಲ್ಲ ಎಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಭಾರಿ ಹಿನ್ನಡೆಯಾಗಿದೆ. ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ದಲಿತ ಸಂಘಟನೆಗಳು ಹೋರಾಟ ನಡೆಸಿಕೊಂಡು ಬಂದಿದ್ದು, ಕುಂದಾಪುರ ಪುರಸಭೆಯಲ್ಲಿ ಜಟಾಪಟಿ ಕೂಡ ನಡೆದಿತ್ತು. 
 ಕುಂದಾಪುರ ಪಾರಿಜಾತ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕೆಂದು ಪುರಸಭೆ ಸದಸ್ಯರು ಒಕ್ಕೊರಳಿನಿಂದ ತೀರ್ಮಾನಿಸಿ ಪುರಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು. ಈ ವಿಚಾರದಲ್ಲಿ ಕಾನೂನು ಸಮ್ಮತಿ ಕೋರಿ ಆಡಳಿತ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಪರಿಶೀಲಿಸಿದ ಪೊಲೀಸ್ ಇಲಾಖೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದು, ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದಲಿತ ಮುಖಂಡ ಎ.ಪ್ರಭಾಕರ್ ಆಡಳಿತಾರೂಢ ಪಕ್ಷದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಪುರಸಭೆ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಿದ್ದು, ಜಿಲ್ಲಾಧಿಕಾರಿ ಕಾನೂನಿನಡಿ ಅನುಮತಿ ನೀಡಲಾಗದು. ಮಹಾನ್ ನಾಯಕರ ಪ್ರತಿಮೆ ರಚಿಸಿ ಅದಕ್ಕೆ ಅಪಮಾನ ಆದಲ್ಲಿ ಅದರ ಹೊಣೆ ಹೊರುವವರು ಯಾರು? ಎಂದು ಪ್ರಶ್ನಿಸಿದ್ದಲ್ಲವೆ ಸರ್ಕಾರದ ಅನುಮತಿ ನೀಡಲಾಗದು ಎಂದು ಸ್ಪಷ್ಟಪಡಿಸಿದ್ದರಿಂದ ಪುರಸಭೆ ಆಡಳಿತದ ಮುಂದಿನ ನಿಲುವೇನು? ಎಂಬುದೇ ಕುತೂಹಲ ಮೂಡಿಸಿದೆ.

ಅಂಬೇಡ್ಕರ್ ಪ್ರತಿಮೆ ರಚಿಸಬೇಕೆಂದು ಹಲವು ವರ್ಷಗಳಿಂದ ಪುರಸಭೆ ಆಡಳಿತ ನಿರ್ಣಯ ಮಂಡಿಸಿ ನಂತರ ವಿಳಂಬ ಧೋರಣೆ ತಳೆಯಿತು. ಇದೀಗ ಜಿಲ್ಲಾಧಿಕಾರಿ ಕಾನೂನಿನಡಿ ಪ್ರತಿಮೆ ನಿರ್ಮಾಣ ಸಾಧ್ಯವಿಲ್ಲ ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಪ್ರತಿಮೆ ರಚನೆಗೆ ಅವಕಾಶ ಇಲ್ಲದೇ ಇದ್ದಲ್ಲಿ ಪಾರಿಜಾತ ವೃತ್ತವನ್ನು ಅಂಬೇಡ್ಕರ್ ವೃತ್ತವನ್ನಾಗಿ ಘೋಷಿಸಿ ಅಭಿವೃದ್ಧಿಪಡಿಸಬೇಕು ಎಂಬುದು ನಮ್ಮ ಬೇಡಿಕೆ

— ವಿ.ಪ್ರಭಾಕರ್, ಅಧ್ಯಕ್ಷ, ಪುರಸಭೆ ಸ್ಥಾಯಿ ಸಮಿತಿ
"

ಸದಸ್ಯರು, ದಲಿತ ಸಂಘಟನೆಗಳ ಒತ್ತಾಯ, ಕೋರಿಕೆ ಮತ್ತು ಮನವಿ ಮೇರೆಗೆ ಪಾರಿಜಾತ ವೃತ್ತದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸಲು ನಿರ್ಣಯ ಮಂಡಿಸಿ ಅದಕ್ಕೆ ಬೇಕಾದ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿತ್ತು. ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದಾಗ ಅವರು ಸುಪ್ರೀಂ ಕೋರ್ಟ್ ನಿರ್ದೇಶನದಡಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಮುಂದೆ ಸದಸ್ಯರು, ಸಂಘಟನೆಗಳ ಸಲಹೆ ಸೂಚನೆ ಮೇರೆಗೆ ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಅನುಸರಿಸಲಾಗುವುದು.

— ಮೋಹನದಾಸ ಶೆಣೈ, ಅಧ್ಯಕ್ಷರು, ಕುಂದಾಪುರ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net