ಸೋರುತ್ತಿದೆ ಸರ್ವಿಸ್​ ಬಸ್​ ನಿಲ್ದಾಣ ಮೇಲ್ಛಾವಣಿ

ಬಸ್​ ತಂಗುದಾಣ ಸಮರ್ಪಕ ನಿರ್ವಹಣೆ ಇಲ್ಲದೆ ತಗಡು ಶೀಟುಗಳು ತೂತಾಗಿವೆ
ಬಸ್​ ತಂಗುದಾಣ ಸಮರ್ಪಕ ನಿರ್ವಹಣೆ ಇಲ್ಲದೆ ತಗಡು ಶೀಟುಗಳು ತೂತಾಗಿವೆ
Published on
ಉಡುಪಿ: ನಗರದ ಸರ್ವಿಸ್​ ಬಸ್​ ನಿಲ್ದಾಣದಲ್ಲಿ ಮಂಗಳೂರಿಗೆ ತೆರಳುವ ವೇಗದೂತ ಬಸ್​ ತಂಗುದಾಣ ಮೇಲ್ಛಾವಣಿ ಸೋರುತ್ತಿದ್ದು, ಮಳೆಗಾಲ ಆರಂಭದಲ್ಲೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳ ತಾಣವಾಗಿರುವ ಉಡುಪಿಗೆ ಪ್ರತಿದಿನ ಸಾವಿರಾರು ಮಂದಿ ಆಗಮಿಸುತ್ತಿದ್ದು, ಕೃಷ್ಣಮಠ, ಕೊಲ್ಲೂರು, ಕಾರ್ಕಳ, ಮಲ್ಪೆ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಹೊರ ಜಿಲ್ಲೆಯ ಪ್ರವಾಸಿಗರು ಹೆಚ್ಚಾಗಿ ಸರ್ವಿಸ್​ ಬಸ್​ ನಿಲ್ದಾಣವನ್ನು ಅವಲಂಬಿಸಿದ್ದು, ಜಿಲ್ಲೆಯ ವಿವಿಧೆಡೆ ಹಾಗೂ ಹೊರ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುತ್ತಾರೆ. ಜೊತೆಗೆ ಸರ್ವಿಸ್​ ಬಸ್​ಗಳಲ್ಲಿ ತೆರಳುವವರು ಉತ್ತರ ಭಾಗದ ಬಸ್​ ನಿಲ್ದಾಣದಲ್ಲೇ ಆಶ್ರಯಿಸಿದ್ದಾರೆ.
ತೂತಾಗಿರುವ ತಗಡುಶೀಟು
ನಗರಸಭೆ ಅಧೀನದಲ್ಲಿರುವ ಬಸ್​ ತಂಗುದಾಣ ಸಮರ್ಪಕ ನಿರ್ವಹಣೆ ಇಲ್ಲದೆ ಕೆಲವು ತಗಡು ಶೀಟುಗಳು ಹಾರಿಹೋಗಿದ್ದು, ಇನ್ನೂ ಕೆಲವು ತೂತಾಗಿವೆ. ಹೀಗಾಗಿ ತಂಗುದಾಣದ ಮೇಲ್ಛಾವಣಿ ಮಳೆ ಬಂದಾಗ ಹಲವೆಡೆ ಸೋರುತ್ತಿದ್ದು, ಪ್ರಯಾಣಿಕರು ಕೊಡೆ ಹಿಡಿದುಕೊಂಡೇ ಬಸ್​ಗಾಗಿ ಕಾಯುವ ಪರಿಸ್ಥಿತಿ ನಿಮಾರ್ಣವಾಗಿದೆ. ರಾತ್ರಿ ವೇಳೆ ಖಾಸಗಿ ಬಸ್​ಗಳಲ್ಲಿ ಬೆಂಗಳೂರಿಗೆ ತೆರಳುವವರೂ ಇದೇ ನಿಲ್ದಾಣದಲ್ಲಿ ಆಶ್ರಯಪಡೆಯುತ್ತಿದ್ದು, ಇತ್ತೀಚೆಗೆ ಕುಡುಕರ ಹಾವಳಿಯೂ ಹೆಚ್ಚಾಗಿದೆ. ಜೊತೆಗೆ ಮಳೆ ಬಂದರೆ ಕೊಡೆ ಹಿಡಿದು ನಿಲ್ಲುವ ಸ್ಥಿತಿ ಇದೆ.
ಮಳೆ ನೀರು ತಂಗುದಾಣದ ಒಳಭಾಗಕ್ಕೂ ಹರಿದು ಬರುತ್ತಿರುವುದರಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಮತ್ತು ಗಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಿರುವ ತಂಗುದಾಣವೇ ಪ್ರಯೋಜನವಿಲ್ಲದಂತಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"

ಬಸ್​ ನಿಲ್ದಾಣದ ದಣ ತುದಿಯಲ್ಲಿ ನಗರಸಭೆಯಿಂದ ಉತ್ತಮ ಬಸ್​ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಅದು ಕಿರಿದಾಗಿದೆ. ಉತ್ತರ ಭಾಗದ ನಿಲ್ದಾಣ ಸಂಪೂರ್ಣ ಕೆಟ್ಟು ಹೋಗಿದ್ದು, ತಗಡು ಶೀಟುಗಳು ಪ್ರಯಾಣಿಕರ ತಲೆ ಮೇಲೆ ಬೀಳುವ ಅಪಾಯವೂ ಇದೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಸ್​ ತಂಗುದಾಣದ ಮೇಲ್ಛಾವಣಿಯನ್ನು ತಕ್ಷಣ ದುರಸ್ತಿ ಮಾಡಬೇಕು.

— ಶ್ರೀನಿವಾಸ್​ ರಾವ್​, ಪ್ರಯಾಣಿಕರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net