ಸರ್ವರ್ ಸಮಸ್ಯೆ ಜನ ಹೈರಾಣ

ಸರ್ವರ್ ಸಮಸ್ಯೆಯಿಂದ ಕಾರ್ಕಳ ತಾಲೂಕಿನ ಉಪನೋಂದಣಾಧಿಕಾರಿ ಕಚೇರಿ ಮುಂಭಾಗ ಸಾಲುಗಟ್ಟಿದ ಜನ.
ಸರ್ವರ್ ಸಮಸ್ಯೆಯಿಂದ ಕಾರ್ಕಳ ತಾಲೂಕಿನ ಉಪನೋಂದಣಾಧಿಕಾರಿ ಕಚೇರಿ ಮುಂಭಾಗ ಸಾಲುಗಟ್ಟಿದ ಜನ.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ತಾಲೂಕಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಳೆದ ಕೆಲವು ದಿನಗಳಿಂದ ಸರ್ವರ್ ಸಂಪರ್ಕದಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ದಸ್ತಾವೇಜುಗಳ ನೋಂದಣಿ ಸೇರಿದಂತೆ ಸಾರ್ವಜನಿಕರ ದೈನಂದಿನ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಜನರು ತೀವ್ರ ತೊಂದರೆಗೆ ಸಿಲುಕಿದ್ದು, ನಿತ್ಯ ನೋಂದಣಿಗಾಗಿ ಕಾದು ಕಾದು ಸುಸ್ತಾಗುವಂತಾಗಿದೆ.
ಮಂಬೈನಂತಹ ಬೇರೆ ರಾಜ್ಯದಿಂದ ಹಾಗೂ ಹೊರ ಜಿಲ್ಲೆ ಮತ್ತು ದೂರದ ಗ್ರಾಮಗಳಿಂದ ಕೆಲಸದ ನಿಮಿತ್ತ ರಜೆ ಹಾಕಿ ಸಾರ್ವಜನಿಕರು, ಜಮೀನು ವಾರಾಟ, ಕ್ರಯವಿಕ್ರಯ, ಆಸ್ತಿ ನೋಂದಣಿ ಹಾಗೂ ಇತರ ದಾಖಲೆಗಳಿಗಾಗಿ ಮುಂಜಾನೆಯೇ ಕಚೇರಿಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ ಸರ್ವರ್ ಕೆಲಸ ವಾಡದ ಪರಿಣಾಮ ಸಂಜೆವರೆಗೂ ಕಚೇರಿ ಬಾಗಿಲ ಬಳಿ ಕಾಯುವಂತಾಗಿದೆ.
ಸರ್ವರ್ ಸಮಸ್ಯೆ ಕುರಿತು ಅಧಿಕಾರಿಗಳಲ್ಲಿ ಕೇಳಿದರೆ ನಮ್ಮದು ಸಮಸ್ಯೆಯಲ್ಲ. ಇದು ಮೇಲ್ಮಟ್ಟದ ತಾಂತ್ರಿಕ ಸಮಸ್ಯೆಯಾಗಿದ್ದು, ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ಸರಿಪಡಿಸಬೇಕಾಗಿದೆ. ನಮಗೆ ಯಾವುದೇ ನಿಯಂತ್ರಣವಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಆದರೆ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಯಾವುದೇ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿ ನಿತ್ಯ ನೋಂದಣಿ ಕಚೇರಿ ಮುಂದೆ ಜನ ಸರತಿಯಲ್ಲಿ ನಿಲ್ಲುವುದು ಬಿಟ್ಟರೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.

ಬಾಕಿ ಉಳಿದ ಕೆಲಸಗಳು

ಸರ್ವರ್ ಸಮಸ್ಯೆಯಿಂದಾಗಿ ಆನ್‌ಲೈನ್ ಮೂಲಕ ಸಲ್ಲಿಸಬೇಕಾದ ದಾಖಲೆಗಳ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಇದರಿಂದಾಗಿ ನೋಂದಣಿಗೆ ನಿಗದಿಪಡಿಸಿದ ದಿನಾಂಕಗಳು ವ್ಯರ್ಥವಾಗುತ್ತಿವೆ. ದಸ್ತಾವೇಜುಗಳ ನೋಂದಣಿಯನ್ನು ನಂಬಿಕೊಂಡಿರುವ ಸ್ಟಾೃಂಪ್ ವೆಂಡರ್‌ಗಳು, ನೋಟರಿಗಳು ಹಾಗೂ ಮಧ್ಯವರ್ತಿಗಳ ಕೆಲಸ ಸ್ಥಗಿತಗೊಂಡಿದ್ದು, ದೈನಂದಿನ ಜೀವನಕ್ಕೆ ಸಂಕಷ್ಟ ಎದುರಾಗಿದೆ.

ವೃದ್ಧರು, ಮಹಿಳೆಯರ ಪರದಾಟ

ಕಚೇರಿಗೆ ಬಂದು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ವಾಣವಾಗಿದ್ದು, ವಯೋವೃದ್ಧರು ಮತ್ತು ಮಹಿಳೆಯರು ನಿಲ್ಲಲು ಸೂಕ್ತ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ದೂರದ ಊರಿನಿಂದ ಬಾಡಿಗೆ ವಾಹನದಲ್ಲಿ ಬಂದವರು ಇಡೀ ದಿನ ಕಚೇರಿ ಬಳಿಯಲ್ಲೇ ಕಾಯುವಂತಾಗಿದೆ. ಅಲ್ಲದೆ ಚಿಕ್ಕ ಮಕ್ಕಳನ್ನು ಕರೆ ತರುವ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಪ್ರತಿ ನಿತ್ಯ ಕಚೇರಿಗೆ ಬಂದು ಹೋಗುವುದೇ ಕೆಲಸವಾಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.

— ಸತೀಶ್, ಸಾರ್ವಜನಿಕ

ಕೆಲಸ ಕಾರ್ಯವನ್ನು ಬಿಟ್ಟು ದೂರದ ಊರಿನಿಂದ ಬಂದ ಜನರಿಗೆ ಸಮಸ್ಯೆಗಳಾಗುತ್ತಿವೆ. ಕೂಡಲೇ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು, ಉಪನೋಂದಣಾಧಿಕಾರಿ ಕಚೇರಿಯ ಸರ್ವರ್ ಸಮಸ್ಯೆಯನ್ನು ಬಗೆಹರಿಸಿ, ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕಾಗಿದೆ.

— ಸರಿತಾ ಶೆಟ್ಟಿ, ವಕೀಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net