ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ

ಪಡಿತರ ಅಕ್ಕಿ
ಪಡಿತರ ಅಕ್ಕಿ
Published on
ಸಂದೀಪ್ ಸಾಲ್ಯಾನ್
ಹಲವು ದಿನಗಳಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದ್ದು ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರು ನ್ಯಾಯಬೆಲೆ ಅಂಗಡಿ, ಸೊಸೈಟಿಯಲ್ಲಿ ದಿನವಿಡೀ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಪಡಿತರ ಅಕ್ಕಿ ಪಡೆಯಲು ಪರತಪಿಸುತ್ತಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಪಡಿತರ ಅಕ್ಕಿ ಪಡೆಯಲು ಗ್ರಾಹಕರಿಗೆ ಸರ್ವರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಒಬ್ಬ ಗ್ರಾಹಕನ ಥಂಬ್ ಪಡೆಯಲು ಅರ್ಧ ಗಂಟೆಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಗ್ರಾಹಕರು ನ್ಯಾಯಬೆಲೆ ಅಂಗಡಿಗಳಲ್ಲಿ ದಿನಗಟ್ಟಲೇ ಕಾಯುವಂತಾಗಿದೆ.
ಸಿಬ್ಬಂದಿಗೆ ಗ್ರಾಹಕರ ತರಾಟೆ: ಈ ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ಎರಡು ಥಂಬ್ ಪಡೆಯಬೇಕಾಗಿರುವುದರಿಂದ ಹೆಚ್ಚಿನ ಕಾಲಾವಕಾಶ ಬೇಕಾಗುತ್ತಿದೆ. ಕೆಲವೊಂದು ಕಡೆ ದಿನಪೂರ್ತಿ ಕಾದು ನಿಂತರೂ ಅಕ್ಕಿ ಲಭಿಸದೆ ಮನೆಗೆ ವಾಪಸ್ ಹೋಗುವಂತಾಗಿದೆ. ಪಡಿತರಕ್ಕಾಗಿ ಎರಡು ಮೂರು ದಿನ ನ್ಯಾಯಬೆಲೆ ಅಂಗಡಿಗೆ ಅಲೆದಾಡಬೇಕಾಗಿದೆ. ಈ ತಾಂತ್ರಿಕ ಅಡಚಣೆಯಿಂದ ಕೂಲಿ ಕೆಲಸ ಮಾಡುತ್ತಿರುವ ಬಿಪಿಎಲ್ ಪಡಿತರ ಚೀಟಿದಾರ ಗ್ರಾಹಕರು ಸಕಾಲದಲ್ಲಿ ಅಕ್ಕಿ ಸಿಗದೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಇನ್ನು ಈ ತಿಂಗಳ ಅಂತ್ಯಕ್ಕೆ ಎರಡು ದಿನಗಳು ಮಾತ್ರ ಬಾಕಿ ಇರುವುದರಿಂದ ಪಡಿತರ ಅಕ್ಕಿ ಸಿಗುತ್ತದೋ ಇಲ್ಲವೋ ಎನ್ನುವ ಭೀತಿಯಿಂದ ಗ್ರಾಹಕರು ನ್ಯಾಯಬೆಲೆ ಅಂಗಡಿಗೆ ಮುಗಿ ಬೀಳುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಲ್ಲಿ ವಿಚಾರಿಸಿದರೆ ಎರಡು ತಿಂಗಳ ಅಕ್ಕಿಯನ್ನು ಒಂದೇ ತಿಂಗಳಿನಲ್ಲಿ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಉದ್ಭವಿಸಿದೆ ಎಂದು ಉತ್ತರ ನೀಡುತ್ತಿದ್ದಾರೆ.

ಸೊಸೈಟಿಗಳಲ್ಲೂ ಇದೇ ಪರಿಸ್ಥಿತಿ

ಸರ್ವಸ್ ಸಮಸ್ಯೆ ಇದ್ದರೂ ನ್ಯಾಯಬೆಲೆ ಅಂಗಡಿಗಳಲ್ಲಿನ ಸಿಬ್ಬಂದಿ ಬೆಳಗ್ಗೆ, ಮಧ್ಯಾಹ್ನ ಬಿಡುವಿನ ವೇಳೆ, ರಾತ್ರಿವರೆಗೂ ಗ್ರಾಹಕರಿಗೆ ಪಡಿತರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಸಹಕಾರಿ ಸಂಘಗಳ ಮೂಲಕ ಪಡಿತರ ಪಡೆಯುವ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸಮಸ್ಯೆ ಕಾಡುತ್ತಿದೆ. ಸೊಸೈಟಿಗಳಲ್ಲಿ ಬೆಳಗ್ಗೆ 10ರಿಂದ 5ರ ಅವಧಿಯಲ್ಲಿ ಮಾತ್ರ ಪಡಿತರ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನ ಬಿಡುವಿನ ವೇಳೆ ಪಡಿತರ ಸಿಗುವುದಿಲ್ಲ,
ಸರ್ಕಾರಿ ರಜಾದಿನವೂ ಪಡಿತರ ವಿತರಣೆಯಾಗುವುದಿಲ್ಲ. ಸರ್ವರ್ ಸಮಸ್ಯೆ ಕಾರಣ ಗ್ರಾಹಕರ ಹಿತಾಸಕ್ತಿ ಅರಿತು ಕೆಲವು ಸೊಸೈಟಿಗಳು ಕೆಲಸದ ಅವಧಿಯ ನಂತರವೂ ರಾತ್ರಿ ತನಕ ಪಡಿತರ ವಿತರಿಸುತ್ತಿವೆ. ಮೇ ತಿಂಗಳ ಪಡಿತರ ಪಡೆಯಲು ಜೂನ್ ಮೊದಲ ವಾರದವರೆಗೂ ಅವಕಾಶ ನೀಡಬೇಕೆಂಬ ಆಗ್ರಹ ಗ್ರಾಹಕರಿಂದ ಕೇಳಿಬರುತ್ತಿದೆ. ಗುರುವಾರ ಬಕ್ರೀದ್ ಹಬ್ಬದ ರಜೆಯಿದ್ದರೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಪಡಿತರ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸರ್ವರ್ ಕೊಕೈಟ್ಟ ಕಾರಣ ಯಾರೊಬ್ಬರಿಗೂ ಪಡಿತರ ವಿತರಣೆಯಾಗಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ಪಡಿತರ ಪಡೆಯಲು ತೊಂದರೆಯಾಗುತ್ತಿದೆ. ಈ ಸಮಸ್ಯೆ ತಿಂಗಳ ಕೊನೆಯ ವರೆಗೂ ಹೀಗೆಯೇ ಮುಂದುವರಿದರೆ ಕೆಲವರು ಪಡಿತರ ಅಕ್ಕಿಯಿಂದ ವಂಚಿತರಾಗುತ್ತಾರೆ. ಮೇ ತಿಂಗಳ ಪಡಿತರ ಅಕ್ಕಿಯನ್ನು ಜೂನ್ ಮೊದಲ ವಾರದವರೆಗೂ ನೀಡಲು ಇಲಾಖೆ ಉನ್ನತ ಅಧಿಕಾರಿಗಳು ಸೂಕ್ತ ಆದೇಶ ನೀಡಬೇಕು.

— ಪ್ರಭಾಕರ ಪ್ರಭು, ಅಧ್ಯಕ್ಷ, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net