ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಮೂಡುಬಿದಿರೆ ವ್ಯಾಪ್ತಿಯ ಮಿಜಾರು-ಬೆಳ್ಳೆಚ್ಚಾರು ಜಂಕ್ಷನ್ ಭಾಗವು ಇದೀಗ ‘ಅಪಘಾತ ವಲಯ’ವಾಗಿ ಪರಿವರ್ತನೆಗೊಂಡಿದ್ದು, ಇಲ್ಲಿನ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಕಾಮಗಾರಿಯಲ್ಲಿನ ಲೋಪದೋಷಗಳಿಂದಾಗಿ ಮಳೆನೀರು ವಿಲೇವಾರಿ, ವಾಹನ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಉದ್ಭವಿಸಿವೆ. ಕಳೆದ ಒಂದು ವಾರದಲ್ಲೇ ಈ ಪ್ರದೇಶದಲ್ಲಿ ನಾಲ್ಕು ಸರಣಿ ಅಪಘಾತಗಳು ಸಂಭವಿಸಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರ ಜೀವಕ್ಕೆ ಅಪಾಯ ಎದುರಾಗಿದೆ.
ಸುರಕ್ಷಿತ ಸಂಚಾರದ ಕೊರತೆ
ಪ್ರಸ್ತುತ ಹೆದ್ದಾರಿ ವಿನ್ಯಾಸದಲ್ಲಿ ಮೂಡುಬಿದಿರೆ ಹಾಗೂ ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಇರುವೈಲು ರಸ್ತೆಗೆ ತಿರುಗಲು ಸುರಕ್ಷಿತ ಅವಕಾಶವಿಲ್ಲ. ಇದರಿಂದ ವಾಹನ ಸವಾರರು ಸುಮಾರು ಎರಡು ಕಿ.ಮೀ. ಸುತ್ತುಬಳಸಿ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆಳ್ವಾಸ್ ಮೆಡಿಕಲ್ ಕಾಲೇಜು, ಕೊಟಕ್ ಮಹೀಂದ್ರಾ ಬ್ಯಾಂಕ್ ಎದುರಿನ ಭಾಗದಲ್ಲಿ ರಸ್ತೆ ದಾಟಲು ಯಾವುದೇ ಸುರಕ್ಷಿತ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಯಭೀತರಾಗಿ ರಸ್ತೆ ದಾಟುವಂತಾಗಿದೆ.
ಹೊಸಬೆಟ್ಟು ಭಾಗದಲ್ಲಿ ಮೇಲ್ಸೇತುವೆ ಅಥವಾ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು, ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು ಮತ್ತು ಸುರಕ್ಷಿತ ತಿರುವುಗಳನ್ನು ಕಲ್ಪಿಸಬೇಕೆಂದು ನಾಗರಿಕ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಸ್ಥಳೀಯರಾದ ರಾಮಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಹರಿಮಿನಾಕ್ಷಿ ದೋಟ, ಹರಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ, ರಿಯಾಜ್, ಹಕೀಮ್, ಮನ್ಸೂರ್ ಸೇರಿದಂತೆ ಹಲವರು ಸ್ಥಳ ಪರಿಶೀಲನೆ ವೇಳೆ ಹಾಜರಿದ್ದರು. ಬಡಗ ಎಡಪದವು ಗ್ರಾಮ ಪಂಚಾಯಿತಿ ವತಿಯಿಂದಲೂ ಈ ಸಂಬಂಧ ಅಧಿಕೃತ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಒಂದು ತಿಂಗಳ ಗಡುವು
ಇತ್ತೀಚೆಗೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ, ವಿದ್ಯಾರ್ಥಿಗಳೂ ಅಪಘಾತಕ್ಕೀಡಾಗುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸಂಸದರು, ಶಾಸಕರು, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಂದಿನ ಒಂದು ತಿಂಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ ಸುಧಾಕರ್ ಪೂಂಜ ಎಚ್ಚರಿಸಿದ್ದಾರೆ.