ಪ್ರತ್ಯೇಕ ಪ್ರಕರಣ, ಯುವಕರಿಬ್ಬರು ನಾಪತ್ತೆ

MISSING
MISSING
Published on
ಪ್ರತ್ಯೇಕ ಪ್ರಕರಣ, ಯುವಕರಿಬ್ಬರು ನಾಪತ್ತೆ
ಪಡುಬಿದ್ರಿ: ನಡ್ಸಾಲು ಗ್ರಾಮದ ರವೀಂದ್ರ(35) ಹಾಗೂ ಕಟಪಾಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಹೆಬ್ರಿಯ ಸುಧೀರ(36) ಎಂಬುವರು ನಾಪತ್ತೆಯಾಗಿರುವ ಪ್ರತ್ಯೇಕ ಪ್ರಕರಣಗಳು ಪಡುಬಿದ್ರಿ ಹಾಗೂ ಕಾಪು ಠಾಣೆಯಲ್ಲಿ ದಾಖಲಾಗಿವೆ.
ಹಾಸನದ ಅರೆಹಳ್ಳಿಯಲ್ಲಿ ಮಾವನ ಮನೆಯಲ್ಲಿ ವಾಸವಾಗಿದ್ದ ರವೀಂದ್ರ ಅವರು ಹಾಸನದಿಂದ ಜುಲೈ 14ರಂದು ಪಡುಬಿದ್ರಿ ಕಂಚಿನಡ್ಕದ ಮನೆಗೆ ಆಗಮಿಸಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದ ಅವರು ಕೆಲಸದ ನಿಮಿತ್ತ 15ರಂದು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದರೂ ಸುಳಿವು ಲಭ್ಯವಾಗಿಲ್ಲ ಎಂದು ಅವರ ತಾಯಿ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಟಪಾಡಿಯ ಬೇಕರಿಯಲ್ಲಿ 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಸುಧೀರ ಎರಡು ಮೂರು ತಿಂಗಳಿಗೊಮ್ಮೆ ಹೆಬ್ರಿಯ ಮನೆಗೆ ಹೋಗಿ ಬರುತ್ತಿದ್ದರು. ಜುಲೈ 14ರಂದು ಮನೆಗೆ ಹೋಗುವುದಾಗಿ ಬೇಕರಿ ಮಾಲೀಕರಿಗೆ ತಿಳಿಸಿ ತೆರಳಿದ್ದರು. 15ರಂದು ಮಾಲೀಕರು ಮನೆಯವರಿಗೆ ಕರೆ ಮಾಡಿ ಸುಧೀರ್ ಬಗ್ಗೆ ವಿಚಾರಿಸಿದ್ದರು.
ಸ್ಕೂಟರ್‌ನಲ್ಲಿ ಕಟಪಾಡಿಯ ಬೇಕರಿಯಿಂದ ಹೋಗಿರುವುದಾಗಿ ಮಾಲೀಕರು ತಿಳಿಸಿದ್ದು, ಅದೇ ದಿನ ಮಧ್ಯಾಹ್ನ ಸಹೋದರ ಸುಕುಮಾರ ಪೂಜಾರಿ ಅವರಿಗೆ ಸುಧೀರ್ ಅವರ ಪತ್ರ ಬಂದಿದ್ದು ಅದರಲ್ಲಿ ನನ್ನ ಅಂತಿಮ ನಿರ್ಧಾರ ಎಂಬುದಾಗಿ ಹಾಗೂ ಹಣಕಾಸಿನ ವಿವರದ ಬಗ್ಗೆ ನಮೂದು ಮಾಡಿರುವುದು ಕಂಡುಬಂದಿತ್ತು. ಅದರಂತೆ ಸುಕುಮಾರ್ ಹಾಗೂ ಸ್ನೇಹಿತರು ಉಡುಪಿ ಜಿಲ್ಲಾದ್ಯಂತ ಹುಡುಕಾಡಿದ್ದು, ಅವರ ಮೊಬೈಲಿಗೆ ಕರೆ ಮಾಡಿದಾಗ ಸ್ವಿಚ್‌ಆಫ್ ಆಗಿತ್ತು ಎಂದು ಸಹೋದರ ಕಾಪು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net