ಪ್ರತಿಭಟನೆಗೆ ಪೂರ್ಣವಿರಾಮವಿತ್ತ ನೊಂದ ಸಾಹಿತಿ

ಉಡುಪಿಯ ಮಣಿಪಾಲದಲ್ಲಿ ಪ್ರತಿಭಟನಾನಿರತ ಸಾಹಿತಿ ತಿಲಕನಾಥ ಮಂಜೇಶ್ವರ ಅವರ ಕೃತಿಗಳನ್ನು ವಿಶ್ವನಾಥ್​ ಶೆಣೈ ಖರೀದಿಸಿದರು. ರವಿರಾಜ್​ ಎಚ್​.ಪಿ., ರಂಜಿನಿ ವಸಂತ್​, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ದೀಪಾ ಕರ್ಕಿ, ಸತೀಶ್​ ಕೊಡವೂರು, ರಾಜೇಶ್​ ಭಟ್​ ಫಣಿಯಾಡಿ ಇದ್ದರು.
ಉಡುಪಿಯ ಮಣಿಪಾಲದಲ್ಲಿ ಪ್ರತಿಭಟನಾನಿರತ ಸಾಹಿತಿ ತಿಲಕನಾಥ ಮಂಜೇಶ್ವರ ಅವರ ಕೃತಿಗಳನ್ನು ವಿಶ್ವನಾಥ್​ ಶೆಣೈ ಖರೀದಿಸಿದರು. ರವಿರಾಜ್​ ಎಚ್​.ಪಿ., ರಂಜಿನಿ ವಸಂತ್​, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ದೀಪಾ ಕರ್ಕಿ, ಸತೀಶ್​ ಕೊಡವೂರು, ರಾಜೇಶ್​ ಭಟ್​ ಫಣಿಯಾಡಿ ಇದ್ದರು.
Published on

* ಮುದ್ರಿತ ಎಲ್ಲ ಪ್ರತಿ ಖರೀದಿಸಿದ ಕಸಾಪ ಉಡುಪಿ ತಾಲೂಕು ಟಕ

ಉಡುಪಿ: ಸರ್ಕಾರದ ನಿರ್ಲಕ್ಷ್ಯದಿಂದ ಅಸಮಾಧಾನಗೊಂಡು ಮಣಿಪಾಲದ ಬಸ್​ ನಿಲ್ದಾಣದ ಬಳಿ ಏ.2ರಿಂದ ಒಬ್ಬಂಟಿಯಾಗಿ ತನ್ನ ಮುದ್ರಿತ ಕೃತಿಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಹಿರಿಯ ಸಾಹಿತಿ, ಪತ್ರಕರ್ತ ತಿಲಕನಾಥ ಮಂಜೇಶ್ವರ ಅವರು ಶನಿವಾರ (ಏ.4) ಪ್ರತಿಭಟನೆಗೆ ಪೂರ್ಣವಿರಾಮ ನೀಡಿದರು. 
ಐದು ವರ್ಷದ ಹಿಂದೆ ಕರ್ನಾಟಕ ಸರ್ಕಾರದ ಗ್ರಂಥಾಲಯ ಇಲಾಖೆಯು ಸಗಟು ಖರೀದಿಯ ಅಡಿಯಲ್ಲಿ ಇವರ ಪುಸ್ತಕಗಳು ಖರೀದಿಗೆ ಆಯ್ಕೆಯಾಗಿತ್ತು. ಆದರೆ, ಈವರೆಗೂ ಖರೀದಿ ಮಾಡದ್ದರಿಂದ ನೊಂದು, ತನ್ನ 110 ರೂ. ಮುಖಬೆಲೆಯ ಪುಸ್ತಕವನ್ನು ಕೇವಲ 10 ರೂ.ಗೆ ಮಾರಾಟ ಮಾಡುವ ಮೂಲಕ ಮೌನ ಪ್ರತಿಭಟನೆ ನಡೆಸುತ್ತಿದ್ದರು.

ಪುಸ್ತಕ ಖರೀದಿಸಿದ ಕಸಾಪ

ಮಾಧ್ಯಗಳಲ್ಲಿ ಇವರ ಪ್ರತಿಭಟನೆಯ ಸುದ್ದಿ ಹಾಗೂ ಸಾಹಿತ್ಯ ಪ್ರೇಮಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಾಹಿತಿಯ ಪ್ರತಿಭಟನೆಯ ಫೋಟೋ ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದರು. ಅದನ್ನು ಕಂಡ ಉಡುಪಿ ತಾಲೂಕು ಕಸಾಪ ಘಟಕದ ಅಧ್ಯಕ್ಷ ರವಿರಾಜ್​ ಎಚ್​ಪಿ. ಮತ್ತು ಎಲ್ಲ ಸದಸ್ಯರು ಪ್ರತಿಭಟನಾ ನಿರತ ಮಂಜೇಶ್ವರರ ಬಳಿಗೆ ಬಂದು, 'ನಿಮ್ಮ ಎಲ್ಲ ಕೃತಿಗಳ ಪ್ರತಿಗಳನ್ನು ಉಡುಪಿ ತಾಲೂಕು ಪರಿಷತ್​ ಮೂಲಕ ನಾವು ಖರೀದಿಸುತ್ತೇವೆ. ಉತ್ತಮ ಬರಹಗಾರರಾದ ನೀವು ಈ ಇಳಿವಯಸ್ಸಿನಲ್ಲಿ  ಹೀಗೆ ಪ್ರತಿಭಟಿಸಿದರೆ ನಮಗೂ ನೋವಾಗುತ್ತದೆ ಎಂದರು. 
ಕಸಾಪ ಅಧ್ಯಕ್ಷರ ಕಳಕಳಿಗೆ ಪ್ರತಿಕ್ರಿಯಿಸಿದ ಸಾಹಿತಿ, ನಾನು ದುಡ್ಡಿಗಾಗಿ ಪ್ರತಿಭಟಿಸುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಮೌನ ಪ್ರತಿಭಟನೆಯಿದು. ನನ್ನ ಪ್ರತಿಭಟನೆಯ ನಿಯಮ ಕೆಡದಂತೆ ನೀವುಗಳೂ ಸಹ ಒಂದು ಪುಸ್ತಕಕ್ಕೆ 10 ರೂ ಗಳಂತೆ ಕೊಟ್ಟು ಖರೀದಿಸಿ ಎಂದರು.
ಉಡುಪಿ ತಾಲೂಕು ಕಸಾಪ ಗೌರವ ಸಲಹೆಗಾರ ವಿಶ್ವನಾಥ್​ ಶೆಣೈ ಮಾತನಾಡಿ, ಇಲ್ಲಿ ಮಾರಾಟಕ್ಕಿಟ್ಟಿರುವ ನಿಮ್ಮ ಎಲ್ಲ ಕೃತಿಗಳನ್ನು ತಾಲೂಕು ಪರಿಷತ್​ ಪರವಾಗಿ ನಾನು ಖರೀದಿಸುತ್ತೇನೆ. ಅದನ್ನು ಪರಿಷತ್​ನ 'ಗ್ರಂಥಾಲಯ ಅಭಿಯಾನ'ಕ್ಕೆ ನೀಡುತ್ತೇನೆ ಎಂದರು. ಬಳಿಕ ತಿಲಕನಾಥ ಮಂಜೇಶ್ವರ ಅವರು ಪ್ರತಿಭಟನೆ ಕೈಬಿಟ್ಟರು.
ಕಸಾಪ ಘಟಕದ ರಂಜಿನಿ ವಸಂತ್​, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ದೀಪಾ ಕರ್ಕಿ, ಸತೀಶ್​ ಕೊಡವೂರು, ರಾಜೇಶ್​ ಭಟ್​ ಫಣಿಯಾಡಿ ಇದ್ದರು.
"

ಉಡುಪಿಯು ಪ್ರಜ್ಞಾವಂತರ ಜಿಲ್ಲೆ. ಇಲ್ಲಿ ಅಥವಾ ಇನ್ನಾವುದೇ ಜಿಲ್ಲೆಯಲ್ಲಿ ಇಂತಹ ಘಟನೆ ಮತ್ತೆ ನಡೆಯದಿರಲಿ. ವಯೋವೃದ್ಧ, ಜ್ಞಾನವೃದ್ಧರಾದ ಈ ಸಾಹಿತಿಯ ಪ್ರತಿಭಟನೆಯಿಂದಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ. ಯಾವುದೇ ಬರಹಗಾರರನ್ನು ನಿರ್ಲಕ್ಷಿಸದಿರಲಿ. ಇನ್ನೊಮ್ಮೆ ಯಾವುದೇ ಸಾಹಿತಿಗಳು ಬೀದಿಗೆ ಬಂದು ಪುಸ್ತಕ ಮಾರುವಂತಾಗದಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net