ಉಡುಪಿ: ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಕರ್ಜೆಯ ಹಿರಿಯ ಸಸ್ಯಶಾಸ್ತ್ರಜ್ಞ ಮಂಜುನಾಥ್ ಗೋಳಿ (75) ಶುಕ್ರವಾರ (ಆ.7) ನಿಧನರಾದರು.
ನೂರಾರು ಔಷಧೀಯ ಸಸ್ಯಗಳ ವೈಜ್ಞಾನಿಕ ಮಹತ್ವ ಅರಿತಿದ್ದ ಅವರು ವಿವಿಧ ಸಸ್ಯಗಳ ಕನ್ನಡ, ಆಂಗ್ಲ ಮತ್ತು ಸಂಸ್ಕೃತದ ಹೆಸರು ಬಲ್ಲವರಾಗಿದ್ದರು.
ಪ್ರಗತಿಪರ ಕೃಷಿಕ, ಆಯುರ್ವೇದ ವೈದ್ಯ, ಪ್ರಾಧ್ಯಾಪಕರೂ ಆಗಿದ್ದರಿಂದ ಅನೇಕ ಬಗೆಯ ಔಷಧೀಯ ಸಸ್ಯಗಳನ್ನೂ ಬೆಳೆಸಿದ್ದರು.
ಪಿಎಚ್.ಡಿ ಮಾಡಲು ಹಲವಾರು ಮಂದಿ ಗೋಳಿ ಅವರಿಂದ ಮಾರ್ಗದರ್ಶನ ಪಡೆದಿದ್ದರು. ಇಸ್ರೋ ಸಹಿತ ಹಲವು ಸಂಸ್ಥೆಗಳಿಗೆ ಔಷಧೀಯ ವನ ನಿರ್ಮಿಸಲು ಮಾರ್ಗದರ್ಶನ ನೀಡಿದ್ದ ಹೆಗ್ಗಳಿಕೆ ಅವರದು.
ಕಲಾಪ್ರೇಮಿಯಾಗಿದ್ದ ಅವರು ಉಡುಪಿ ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಮಾಹಿತಿ ನೀಡಿದ್ದಾರೆ.