ತುಳುವಿಗೆ ಮಣೆ, 'ತುಳುವಪ್ಪೆ'ಗ್​ ಮನ್ನಣೆ

ಉಡುಪಿಯ ಹಿರಿಯ ಚಿತ್ರ ಕಲಾವಿದ ಪಿ.ಎನ್​. ಆಚಾರ್ಯ ರಚಿಸಿದ ತುಳುಮಾತೆ (ತುಳುವಪ್ಪೆ)ಯ ಭಾವಚಿತ್ರ.
ಉಡುಪಿಯ ಹಿರಿಯ ಚಿತ್ರ ಕಲಾವಿದ ಪಿ.ಎನ್​. ಆಚಾರ್ಯ ರಚಿಸಿದ ತುಳುಮಾತೆ (ತುಳುವಪ್ಪೆ)ಯ ಭಾವಚಿತ್ರ.
Published on

* ಮುನ್ನಲೆಗೆ ಬಂದ ಪಿ.ಎನ್​. ಆಚಾರ್ಯರ ಕಲಾಕೃತಿ 

* ಗಮನ ಸೆಳೆಯುತ್ತಿದೆ ತುಳುಮಾತೆಯ ಸುಂದರ ಚಿತ್ರಣ

ಉಡುಪಿ: ತುಳು ಭಾಷೆಗೆ ರಾಜ್ಯ ಸರ್ಕಾರ 2ನೇ ಭಾಷೆಯ ಮಾನ್ಯತೆ ನೀಡಿದ್ದರಿಂದ ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಭಾವೈಕ್ಯದ ಅಧಿದೇವತೆಯಾದ 'ತುಳುವಪ್ಪೆ' (ತುಳುಮಾತೆ)ಯ ಭಾವಚಿತ್ರವನ್ನು ಖ್ಯಾತ ಕಲಾವಿದ ಪಿ.ಎನ್​. ಆಚಾರ್ಯ ಮತ್ತೊಮ್ಮೆ ಬಿತ್ತರಿಸಿದ್ದಾರೆ.
ಅಕ್ರಾಲಿಕ್​ ಶೈಲಿಯಲ್ಲಿ ರಚನೆಗೊಂಡ ಈ ಕಲಾಕೃತಿಯನ್ನು ತುಳು ವಿದ್ವಾಂಸ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ಯ ಹಾಗೂ ಅವರ ತಂಡದ ಸಲಹೆ, ಸೂಚನೆಯ ಮೇರೆಗೆ ತನ್ನದೇ ಕಲ್ಪನೆಯಲ್ಲಿ 2021ರಲ್ಲಿ ರಚಿಸಿದ್ದರು. ತುಳುಮಾತೆಯ ಆ ಭಾವಚಿತ್ರವು ಮೊದಲ ಬಾರಿಗೆ ಎಲ್ಲರಿಂದ ಮಾನ್ಯತೆ ಪಡೆದಿತ್ತು.
ಕೊಡವೂರಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಈ ಕಲಾಕೃತಿಯನ್ನು ಕೊಡಂಕೂರು ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಘುನಾಥ್​ ಮಾಬಿಯಾನ್​ ಮುಂದಾಳತ್ವದಲ್ಲಿ ತುಳುಕೂಟದ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ ಹಾಗೂ ಅಲೆವೂರು ಯೊಗೀಶ್​ ಆಚಾರ್ಯ ಅವರು ಅನಾವರಣಗೊಳಿಸಿದ್ದರು. ಮಂದಿರದ ಧರ್ಮದರ್ಶಿ ದಿವಾಕರ್​ ಶೆಟ್ಟಿ ಕೊಡವೂರು ಉಪಸ್ಥಿತರಿದ್ದರು.
ಸಂಚಾಲಕರಾದ ಮಹಾಬಲ ಕುಂದರ್​, ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್​, ಅಶೋಕ್​ ಪೂಜಾರಿ, ಜಯಂತಿ, ಆಶಾ, ಚೇತನ್​ ನಾವೇಕರ್​, ರಮೇಶ್​ ಸಿ. ಬಂಗೇರ, ಜಗನ್ನಾಥ ಪೂಜಾರಿ ಇನ್ನಿತರರು ಪಾಲ್ಗೊಂಡಿದ್ದರು ಎಂದು ಪಿ.ಎನ್​. ಆಚಾರ್ಯ ಸ್ಮರಿಸಿಕೊಂಡಿದ್ದಾರೆ.

ಕರಾವಳಿಯ ಭಾವೈಕ್ಯದ ಅಧಿದೇವತೆ

ತುಳುವಪ್ಪೆಯ ಮುಂದಿನ ಬಲಗೈ ಅಭಯ ಹಸ್ತದಲ್ಲಿ ಭತ್ತದ ತೆನೆ, ಮುಂದಿನ ಎಡಗೈಯಲ್ಲಿ ಅಗ್ನಿಯಿರುವ ಪಂಚದೀವಟಿಗೆ, ಹಿಂಬದಿ ಬಲಗೈಯಲ್ಲಿ ತಾಳೆಓಲೆಯ ತುಳುಗ್ರಂಥ, ಹಿಂಬದಿಯ ಎಡಗೈಯಲ್ಲಿ ಸೂರ್ಯ-ಚಂದ್ರರಿರುವ ತುಳುಧ್ವಜ ಹಿಡಿದಿದ್ದಾಳೆ. ಧರಿಸಿದ ಆಭರಣವೂ ಸಹ ತುಳು ಸಂಸ್ಕೃತಿಯ ಪ್ರತೀಕವಾಗಿದೆ. ಕಿರೀಟದ ಹಿಂಬದಿಯಲ್ಲಿ ಸೂರ್ಯ ಪ್ರಭಾವಳಿ, ಕಿರೀಟದ ತುದಿಯಲ್ಲಿ ತುಳುನಾಡಿನ ಆಚರಣೆ, ಮೆರವಣಿಗೆ, ಕೋಲ ಇನ್ನಿತರ ಸಂಕೇತವಿದೆ. ಸೊಂಟದ ಪಟ್ಟಿಯಲ್ಲಿ ಕಲಶ ಮತ್ತು ಸ್ವಸ್ತಿಕ್​ ಅಳವಡಿಸಲಾಗಿದೆ. ಶುಭಸೂಚಕವಾಗಿ ದೇವಿಯ ಬಲಗಾಲು ಮುಂದೆ ಇಟ್ಟ ರೀತಿಯಲ್ಲಿದೆ. ತುಳುನಾಡಿನಲ್ಲಿ ಕೆಂಪು ಬಣ್ಣಕ್ಕೆ ವಿಶೇಷ ಪ್ರಾಧಾನ್ಯತೆ ಇರುವುದರಿಂದ ಅದೇ ಬಣ್ಣದ ಸೀರೆ, ನಿತ್ಯಹರಿದ್ವರ್ಣದ ಸೂಚಕವಾಗಿ ಸೊಂಟಕ್ಕೆ ಹಸಿರು ಬಣ್ಣದ ಅರಿವೆ ಇದೆ. ಸೌಮ್ಯತೆ ಹಾಗೂ ಗೌರವದ ಸೂಚಕವಾಗಿ ದೇವಿಯ ತಲೆ ಸ್ವಲ್ಪ ತಗ್ಗಿಸಿ ನೋಡುತ್ತಿರುವಂತೆ ಚಿತ್ರಿಸಲಾಗಿದೆ. ದೇವಿಯ ಹಿಂಬದಿಯಲ್ಲಿ ತುಳುನಾಡಿನ ನೆ ಹಾಗೂ ದೇವಿಯ ಸುತ್ತಲಿನ ಪ್ರಕೃತಿಯಲ್ಲಿ ಧರ್ಮಸ್ಥಳ ದೇಗುಲ, ಚರ್ಚ್​ ಮತ್ತು ಮಸೀದಿಯ ಚಿತ್ರಣವೂ ಇದ್ದು ಭಾವೈಕ್ಯದ ಪ್ರತೀಕವಾಗಿ ನಿಂತಿದ್ದಾಳೆ.
"

ನಾನು ಚಿತ್ರಿಸಿದ್ದ ಕೋಟಿ ಚನ್ನಯ್ಯನ ಚಿತ್ರ 1980ರ ಮಾರ್ಚ್​ನಲ್ಲಿ ಬಿಡುಗಡೆಯಾಗಿತ್ತು. ಬಳಿಕ ತುಳುಮಾತೆಯ ಚಿತ್ರ ರಚಿಸುವ ಆಸೆಯಾಯಿತು. ಹೀಗಾಗಿ 2011ರ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ಯ ಅವರ ಮಾರ್ಗದರ್ಶನ ಹಾಗೂ ಹಲವರ ಸಹಕಾರದಲ್ಲಿ ತುಳುವಪ್ಪೆ ಚಿತ್ರ ರಚಿಸಿದ್ದೆ. ಇದೀಗ ಸರ್ಕಾರ ತುಳುವಿಗೆ 2ನೇ ಭಾಷೆಯ ಸ್ಥಾನಮಾನ ನೀಡಿದ್ದು ಸಂತಸ ತಂದಿದ್ದು, ತುಳುಮಾತೆ ಮುನ್ನೆಲೆಗೆ ಬಂದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net