ಕೊಳಚೆಯಲ್ಲೇ ಮೀನು ಮಾರಾಟ!

 ಕಾಸರಗೋಡು ನಗರಸಭಾ ಮೀನು ಮಾರುಕಟ್ಟೆಯಲ್ಲಿ ಕೊಳಚೆನೀರಲ್ಲೇ ಮೀನು ಮಾರಾಟ ಮಾಡುತ್ತಿರುವುದು.
ಕಾಸರಗೋಡು ನಗರಸಭಾ ಮೀನು ಮಾರುಕಟ್ಟೆಯಲ್ಲಿ ಕೊಳಚೆನೀರಲ್ಲೇ ಮೀನು ಮಾರಾಟ ಮಾಡುತ್ತಿರುವುದು.
Published on
ಪುರುಷೋತ್ತಮ ಪೆರ್ಲ ಕಾಸರಗೋಡು
ನಗರಸಭೆ ಅಧೀನದಲ್ಲಿರುವ ಕಾಸರಗೋಡು ಮೀನು ಮಾರುಕಟ್ಟೆ ಕೊಳಚೆ ಕೊಂಪೆಯಾಗಿದ್ದು ಗಬ್ಬೆದ್ದು ನಾರುತ್ತಿದೆ. ಕೊಳಚೆ ನೀರು ಹರಿದು ಅಸಹನೀಯವಾಗಿರುವ ಈ ಮೀನು ಮಾರುಕಟ್ಟೆಗೆ ನಿತ್ಯವೂ ನೂರಾರು ಗ್ರಾಹಕರು ಮೀನು ಖರೀದಿಗೆ ಬರುತ್ತಾರೆ. ಇನ್ನು ವೃದ್ಧ ಮಹಿಳೆಯರ ಸಹಿತ ಹಲವಾರು ಮಂದಿ ಮೀನು ಮಾರಾಟಗಾರರು ಇಲ್ಲಿ ಮಳೆ, ಬಿಸಿಲಿಗೆ ಮೈಯೊಡ್ಡಿ ಮೀನು ಮಾರುವಂತಹ ದುಸ್ಥಿತಿ ಇದೆ.
ಆರೋಗ್ಯಕ್ಕೆ ಉತ್ತಮ ಆಹಾರವೆಂದು ನಾವು ಖರೀದಿಸುವ ಮೀನನ್ನು ಇಲ್ಲಿ ಕೊಳಚೆನೀರು ಹರಿದುಬರುವ ರಸ್ತೆಯಲ್ಲೇ ಸುರಿದು ಮಾರಾಟ ಮಾಡಲಾಗುತ್ತಿದೆ. ಮಳೆ ಜೋರಾಗಿ ಬಂದಾಗ ಮಾರುಕಟ್ಟೆಗೆ ಕಾಲಿಡಲಾಗದ ಸ್ಥಿತಿ ಎದುರಾಗುತ್ತಿದೆ. ವರ್ಷಗಳ ಹಿಂದೆ ನಗರಸಭೆ ವತಿಯಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಮೀನು ಮಾರುಕಟ್ಟೆ ಕಟ್ಟಡ ಬಹುತೇಕ ಉಪಯೋಗ ಶೂನ್ಯವಾಗಿದೆ. ಬಹುತೇಕ ಮೀನುಮಾರಾಟಗಾರರು ಕಟ್ಟಡದೊಳಗೆ ಮೀನು ಮಾರಾಟಕ್ಕೆ ಮುಂದಾಗುತ್ತಿಲ್ಲ.
ಮಾರುಕಟ್ಟೆಯೊಳಗೆ ಸೂಕ್ತ ಗಾಳಿ-ಬೆಳಕು ಇಲ್ಲ. ಜತೆಗೆ ಕಲುಷಿತ ನೀರು ಹರಿಯಲೆಂದು ನಿರ್ಮಿಸಿರುವ ಚರಂಡಿ ಕೂಡ ಅಸಮರ್ಪಕವಾಗಿದ್ದು ಕಾಸರಗೋಡಿನ ಮೀನು ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ.

ಮೂಗು ಮುಚ್ಚಿಕೊಂಡೇ ಖರೀದಿ

ಮೀನು ಖರೀದಿಗೆ ತೆರಳುವ ಗ್ರಾಹಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ. ಜತೆಗೆ ಕೆಸರುಮಯ ಪರಿಸರದಲ್ಲಿ ಬಟ್ಟೆಗೆ ರಾಡಿಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತಿದೆ. ವಿವಿಧೆಡೆ ಕಲುಷಿತ ನೀರು ದಾಸ್ತಾನುಗೊಳ್ಳುತ್ತಿದ್ದು, ನಗರಸಭೆ ಆರೋಗ್ಯ ಇಲಾಖೆ ಕಂಡೂ ಕಾಣದಂತೆ ವರ್ತಿಸುತ್ತಿದೆ. ಇನ್ನು ಶುಚಿತ್ವ ಮಿಷನ್ ಆಗಲಿ, ಆಹಾರ ಸುರಕ್ಷಾ ವಿಭಾಗದ ಅಧಿಕಾರಿಗಳಾಗಲಿ ಇತ್ತ ತಲೆಹಾಕುತ್ತಿಲ್ಲ.
ಕಾಸರಗೋಡು ನಗರಸಭಾ ಮೀನುಮಾರುಕಟ್ಟೆ ಸುತ್ತು ತುಂಬಿಕೊಂಡಿರುವ ಕಲುಷಿತ ನೀರು, ಕಾಸರಗೋಡಿನ ಜನತೆಯ ಆರೋಗ್ಯದ ಬಗ್ಗೆ ನಗರಸಭೆ ತೋರುತ್ತಿರುವ ಕಾಳಜಿಗೆ ನಿದರ್ಶನವಾಗಿದೆ. ಹಲವು ದಶಕಗಳಿಂದ ಕಾಸರಗೋಡು ನಗರಸಭಾ ಆಡಳಿತ ಮುಸ್ಲಿಂ ಲೀಗ್ ನೇತೃತ್ವದ ಐಕ್ಯರಂಗದ ಅಧೀನದಲ್ಲಿದ್ದು, ಪ್ರಸಕ್ತ ರಾಜ್ಯ ಸರ್ಕಾರವೂ ಕಾಂಗ್ರೆಸ್ ಆಳ್ವಿಕೆಯಲ್ಲಿರುವುದರಿಂದ ಕಾಸರಗೋಡಿಗೆ ಸುಸಜ್ಜಿತ ಮೀನು ಮಾರುಕಟ್ಟೆ ಮಂಜೂರಾಗಿ ಲಭಿಸುವುದು ಕಷ್ಟಸಾಧ್ಯವಾಗದು ಎಂಬುದು ಸ್ಥಳೀಯ ನಿವಾಸಿಗಳ ಅನಿಸಿಕೆಯಾಗಿದೆ.

ಕಾಸರಗೋಡು ಮೀನು ಮಾರುಕಟ್ಟೆಯಲ್ಲಿ ದೀರ್ಘ ಕಾಲದಿಂದ ಕಾಡುತ್ತಿರುವ ಸಮಸ್ಯೆ ಇದಾಗಿದ್ದು, ಸೂಕ್ತ ಪರಿಹಾರಕ್ಕಾಗಿ ನಗರಸಭೆ ಯೋಜನೆ ತಯಾರಿಸುತ್ತಿದೆ. ಇದಕ್ಕಾಗಿ ನಗರಸಭೆ ವತಿಯಿಂದ ಸರ್ಕಾರಕ್ಕೆ ಡಿಪಿಆರ್(ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಸಲ್ಲಿಸಲಾಗಿದೆ. ಇದು ಅಂಗೀಕಾರಗೊಂಡು ಲಭಿಸಿದಲ್ಲಿ, ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ನಗರಸಭೆ ಮುಂದಾಗಲಿದೆ. ಈ ಹಿಂದಿನ ಸಮಸ್ಯೆ ಮರುಕಳಿಸದಂತೆ ಯೋಜನಾಬದ್ಧವಾಗಿ ಕಟ್ಟಡ ನಿರ್ಮಿಸಲಾಗುವುದು.

— ಶಾಹಿನಾ ಸಲೀಂ, ಕಾಸರಗೋಡು ನಗರಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net